ಮುಂಬೈ: ಓಂ ರಾವತ್ ನಿರ್ದೇಶನ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭಾಸ್ ನಟನೆಯ ಸಿನಿಮಾ ಆದಿಪುರುಷ (Adipurush Movie) ಬಿಡುಗಡೆಯಾಗಿ ಹಲವಾರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದೆ. ಸಿನಿಮಾ ಬಿಡುಗಡೆಗೂ ಮೊದಲು ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿತ್ತಾದರೂ ಸಿನಿಮಾ ಬಿಡುಗಡೆಯಾದ ನಂತರ ವೀಕ್ಷಕರ ಕೋಪಕ್ಕೆ ಸಿನಿಮಾ ಗುರಿಯಾಗಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಸಿನಿಮಾ ಈಗಾಗಲೇ ಗಳಿಕೆಯಲ್ಲಿ ಭಾರೀ ಹಿಂದಕ್ಕೆ ಹೋಗಿದೆ.
ಹೌದು. ಆದಿಪುರುಷ ಸಿನಿಮಾ ವಾರಾಂತ್ಯದಲ್ಲಿ ದೇಶಾದ್ಯಂತ ಒಟ್ಟು 220 ಕೋಟಿ ರೂ. ಗಳಿಸಿಕೊಂಡಿತ್ತು. ಆದರೆ ಮಂಗಳವಾರ ಈ ಸಿನಿಮಾ ದೇಶಾದ್ಯಂತ ಗಳಿಸಿರುವುದು ಕೇವಲ 10.80 ಕೋಟಿ ರೂ. ಮಾತ್ರ. ಮಂಗಳವಾರದವರೆಗೆ ಸಿನಿಮಾದ ಒಟ್ಟಾರೆ(ವಿಶ್ವಾದ್ಯಂತ) ಗಳಿಕೆ 375 ಕೋಟಿ ರೂ. ಎಂದು ಟಿ ಸೀರಿಸ್ ಹೇಳಿಕೊಂಡಿದೆ.
ಇದನ್ನೂ ಓದಿ: Viral News : ಹೆಂಡತಿಯನ್ನು ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ ಗಂಡ!
ಈ ಸಿನಿಮಾದ ವಿತರಕರಾಗಿರುವ ಅಕ್ಷಯ್ ರಥಿ ಅವರ ಪ್ರಕಾರ ಸಿನಿಮಾ ಟಿಕೆಟ್ ಮಾರಾಟ ಪ್ರಮಾಣ ಶೇ. 65-70 ಕುಸಿತ ಕಂಡಿದೆಯಂತೆ. “ಸಿನಿಮಾವನ್ನು ಜನರು ಮೆಚ್ಚಿಕೊಂಡಿಲ್ಲ. ಹಾಗಾಗಿ ಟಿಕೆಟ್ ಮಾರಾಟ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನೊಂದತ್ತ ಆದಿಪುರುಷ ಸಿನಿಮಾವನ್ನು ಪ್ರದರ್ಶನವಾಗದಂತೆ ನಿಷೇಧಿಸಬೇಕು ಎಂದು ಅಖಿಲ ಭಾರತೀಯ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ರಾಮಾಯಣದ ಕಥೆಯಾಗಿರುವ ಈ ಸಿನಿಮಾದಲ್ಲಿ ರಾಮ ಮತ್ತು ಹನುಮನ ಚಿತ್ರಣವನ್ನು ಹಾಳು ಮಾಡಲಾಗಿದೆ. ಸನಾತನ ಧರ್ಮದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ. ಈ ಸಿನಿಮಾ ಸಂಪೂರ್ಣ ಹಾಳಾಗಿರುವ ಸಿನಿಮಾದ ಎಂದು ಎಐಸಿಡಬ್ಲ್ಯುಎ ದೂರಿದೆ.