ಮುಂಬೈ: ಓಂ ರಾವತ್ ನಿರ್ದೇಶನದ, ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ (Adipurush Movie) ಬಿಡುಗಡೆಯಾಗಿ ಒಂದೇ ವಾರದಲ್ಲಿ ಜನರಿಂದ ತಿರಸ್ಕೃತಗೊಳ್ಳಲಾರಂಭಿಸಿದೆ. ಬಿಡುಗಡೆಯಾದ ದಿನ ಮತ್ತು ವಾರಾಂತ್ಯದಲ್ಲಿ ಒಳ್ಳೆಯ ಗಳಿಕೆಯನ್ನೇ ಕಂಡುಕೊಂಡಿದ್ದ ಸಿನಿಮಾ ಈ ವಾರದ ಆರಂಭದಿಂದಲೂ ಗಳಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿಕೊಂಡಿದೆ.
ಸೋಮವಾರ ಆದಿಪುರುಷ ಸಿನಿಮಾ 20 ಕೋಟಿ ರೂ. ಗಳಿಸಿತ್ತು. ಮಂಗಳವಾರ ಅದು ಅರ್ಧದಷ್ಟು ಅಂದರೆ 10 ಕೋಟಿ ರೂ.ಗೆ ಇಳಿದಿತ್ತು. ಬುಧವಾರ ಕೂಡ ಇಳಿಕೆ ಮುಂದುವರಿದಿದ್ದು ಸಿನಿಮಾ ದೇಶಾದ್ಯಂತ ಕೇವಲ 7.50 ಕೋಟಿ ರೂ. ಗಳಿಸಿಕೊಂಡಿದೆ. ಅಲ್ಲಿಗೆ ದೇಶಾದ್ಯಂತ ಸಿನಿಮಾ ಒಟ್ಟು 255.30 ಕೋಟಿ ರೂ. ಸಂಪಾದಿಸಿದಂತಾಗಿದೆ. ವಿಶ್ವದ್ಯಾಂತ ಲೆಕ್ಕಾಚಾರ ಹಾಕಿದರೆ ಅದು 395 ಕೋಟಿ ರೂ. ಆಗಿದೆ.
ಇದನ್ನೂ ಓದಿ: Adipurush Movie: ಬಾಕ್ಸಾಫಿಸ್ ಗಳಿಕೆಯಲ್ಲಿ ಮುಗ್ಗರಿಸಿದ ‘ಆದಿಪುರುಷ’! ಫ್ಲಾಪ್ ಆಯ್ತಾ ‘ಬಾಹುಬಲಿ’ ಪ್ರಭಾಸ್ ಸಿನಿಮಾ?
ಸಿನಿಮಾದಲ್ಲಿ ಹಲವಾರು ಡೈಲಾಗ್‌ಗಳ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹನುಮಂತ ರಾವಣನಿಗೆ ನಿಮ್ಮಪ್ಪ ಎಂದು ಬೈಯುವುದು ಸೇರಿ ಅನೇಕ ಡೈಲಾಗ್ ವಿಚಾರದಲ್ಲಿ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದನ್ನು ಸರಿಪಡಿಸುವುದಾಗಿ ಹೇಳಿದ್ದ ಸಿನಿತಂಡ ಅದನ್ನು ಬದಲಾವಣೆ ಮಾಡಿ ತೆರೆ ಮೇಲೆ ಬಿಟ್ಟಿದೆ. ಆದರೂ ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.
ಇನ್ನು ಸಿನಿಮಾ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿ ಸಿನಿಮಾ ತೆರೆಗಳಿಂದ ದೂರವಾಗುವ ಭಯದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ಟಿ ಸೀರಿಸ್ ಮತ್ತೊಂದು ಆಫರ್ ಅನ್ನು ಜನರ ಮುಂದೆ ಇಟ್ಟಿದೆ. 3ಡಿ ಸಿನಿಮಾ ಟಿಕೆಟ್ ದರವನ್ನು 150 ರೂ.ಗೆ ಇಳಿಸಿರುವುದಾಗಿ ಘೋಷಿಸಿಕೊಂಡಿದೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನೂ ಹಂಚಿಕೊಂಡಿದೆ. ಈ ಗುರುವಾರ ಮತ್ತು ಶುಕ್ರವಾರದಂದು ಆದಿಪುರುಷ ಸಿನಿಮಾಕ್ಕೆ ವಿಶೇಷ ಆಫರ್ ಆಗಿ 150 ರೂ.ಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಆದರೆ ಈ ಆಫರ್ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಆದಿಪುರುಷ ಸಿನಿಮಾ ತೆರೆಯಿಂದ ಸರಿದುಹೋಗದಂತೆ ತಡೆಯಲು ಸಿನಿ ತಂಡ ಮತ್ತು ನಿರ್ಮಾಣ ಸಂಸ್ಥೆ ಎಲ್ಲ ರೀತಿಯ ಪ್ರಯತ್ನಗಳಂತೂ ಮಾಡುತ್ತಿದೆ. ಆದರೆ ಜನರು ಅದನ್ನು ಒಪ್ಪಿ ಸಿನಿಮಾ ವೀಕ್ಷಿಸುತ್ತಾರಾ ಎನ್ನುವುದು ಈ ಎರಡು ದಿನಗಳ ಗಳಿಕೆಯಿಂದ ತಿಳಿದುಬರಲಿದೆ.