ಮುಂಬೈ: ಓಂ ರಾವತ್ ನಿರ್ದೇಶನದ, ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭಾಸ್ ನಟನೆಯ ʼಆದಿಪುರುಷʼ ಸಿನಿಮಾ (Adipurush Movie) ಬಿಡುಗಡೆಗೆ ಮೊದಲು ಭಾರೀ ನಿರೀಕ್ಷೆ ಹುಟ್ಟಿಸಿತ್ತಾದರೂ ಬಿಡುಗಡೆಯಾದಾಗಿನಿಂದಲೂ ಜನರಿಂದ ಭಾರೀ ವಿರೋಧ ಪಡೆದುಕೊಳ್ಳುತ್ತಿದೆ. ಎಲ್ಲೆಡೆ ಸಿನಿಮಾ ಶೋ ಕ್ಯಾನ್ಸಲ್ ಆಗುತ್ತಿದ್ದು, ಸಿನಿಮಾ ಎಂಟನೇ ದಿನದಂದು ಭಾರೀ ಕಡಿಮೆ ಗಳಿಕೆ ಕಂಡುಕೊಂಡಿದೆ.
ಕಳೆದ ಶುಕ್ರವಾರ ಬಿಡುಗಡೆಯಾದ ಸಿನಿಮಾದ ಈ ಗುರುವಾರದ ಅಂತ್ಯಕ್ಕೆ ದೇಶಾದ್ಯಂತ ಒಟ್ಟು 260 ಕೋಟಿ ರೂ. ಗಳಿಸಿಕೊಂಡಿದೆ. ಶುಕ್ರವಾರ ಸಿನಿಮಾ ಕೇವಲ 3.25 ಕೋಟಿ ರೂ. ಗಳಿಸಿದೆ. ಸಿನಿಮಾದ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ನಿರ್ಮಾಣ ತಂಡವಾದ ಟಿ ಸೀರಿಸ್, ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಿತ್ತು. ಜೂನ್ 22 ಮತ್ತು 23ರಂದು ಆದಿಪುರುಷ 3 ಡಿ ಸಿನಿಮಾವನ್ನು ಕೇವಲ 150 ರೂಪಾಯಿಯಲ್ಲಿ ನೋಡಿ ಎಂದು ಪ್ರಚಾರ ಮಾಡಿತ್ತು. ಈ ಆಫರ್ ಇದ್ದರೂ ಜನರು ಸಿನಿಮಾ ನೋಡುವುದಕ್ಕೆ ಮುಂದೆ ಬಂದಿಲ್ಲ!
ಇದನ್ನೂ ಓದಿ: Adipurush Movie: ‘ಅಂತ್ಯ’ದತ್ತ ‘ಆದಿ’ಪುರುಷ ಕಲೆಕ್ಷನ್, ಟಿಕೆಟ್ ದರವನ್ನೇ ಇಳಿಸಿದ ನಿರ್ಮಾಣ ಸಂಸ್ಥೆ
ಆದಿಪುರುಷ ಸಿನಿಮಾ ರಾಮಾಯಣದ ಕಥೆಯನ್ನು ಆಧರಿಸಿ ಮಾಡಿರುವ ಸಿನಿಮಾವಾಗಿದೆ. ಆದರೆ ಇದರಲ್ಲಿ ರಾಮಾಯಣವನ್ನು ತಿರುಚಲಾಗಿದೆ. ರಾಮಾಯಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ರಾಮಾಯಣದ ಹಲವು ಪಾತ್ರಗಳನ್ನು ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ತೋರಿಸಿರುವುದರಿಂದಾಗಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದಂತಾಗಿದೆ ಎಂದೂ ಹೇಳಲಾಗಿತ್ತು. ಅದೇ ಕಾರಣಕ್ಕೆ ಅನೇಕರು ಸಿನಿಮಾ ಪ್ರದರ್ಶನ ನಿಷೇಧವಾಗಬೇಕು ಎಂದೂ ಹೇಳಿದ್ದರು.
ಪ್ರಭಾಸ್ ಜತೆ ಬಾಲಿವುಡ್ ನಟಿ ಕೃತಿ ಸೆನೂನ್, ಸೈಫ್ ಅಲಿ ಖಾನ್ ಸೇರಿ ಅನೇಕರು ನಟಿಸಿರುವ ಈ ಸಿನಿಮಾವನ್ನು 600 ಕೋಟಿ ರೂ. ಬಂಡವಾಳದಲ್ಲಿ ಮಾಡಲಾಗಿದೆ ಎನ್ನಲಾಗಿತ್ತು. ಸಿನಿಮಾದ ಸದ್ಯ ವಿಶ್ವಾದ್ಯಂತ 400 ಕೋಟಿ ರೂ. ಅನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಅಂಕಿಸಂಖ್ಯೆ ನಿಖರವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಎರಡನೇ ವಾರದಲ್ಲಿ ಸಿನಿಮಾ ಯಾವ ರೀತಿಯಲ್ಲಿ ಗಳಿಕೆ ಕಾಣುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.