ಮುಂಬೈ: ಇತ್ತೀಚೆಗೆ ಛತ್ತೀಸ್‌ಗಢದ ಕಾಲೇಜೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ, ನಿರೂಪಕ ಆದಿತ್ಯ ನಾರಾಯಣ್ (Aditya Narayan) ವಿದ್ಯಾರ್ಥಿಯೊಬ್ಬನ ಮೊಬೈಲ್ ಕಸಿದು ಎಸೆದಿರುವ ವಿಡಿಯೊ ವೈರಲ್ (Viral Video) ಆಗಿತ್ತು. ಗಾಯಕನ ವರ್ತನೆಯನ್ನು ನೆಟ್ಟಿಗರು ಟೀಕಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾರ್ಯಕ್ರಮದ ಆಯೋಜಕರು ಆದಿತ್ಯ ನಾರಾಯಣ ಪರ ಬ್ಯಾಟ್ ಬೀಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆ ವ್ಯಕ್ತಿ ವಿದ್ಯಾರ್ಥಿಯೇ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆತ ನಿರಂತರವಾಗಿ ಆದಿತ್ಯ ನಾರಾಯಣ್ ಅವರ ಕಾಲನ್ನು ಹಿಡಿದು ಎಳೆಯುತ್ತಿದ್ದ. ಇದರಿಂದ ತಾಳ್ಮೆ ಕಳೆದುಕೊಂಡು ಅವರು ಆ ರೀತಿಯಾಗಿ ವರ್ತಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆಯೋಜಕರು ಹೇಳಿದ್ದೇನು?
ಘಟನೆಯ ಬಗ್ಗೆ ಕಾರ್ಯಕ್ರಮದ ಮುಖ್ಯ ಆಯೋಜಕರು ಮಾತನಾಡಿ, ”ಅ ವ್ಯಕ್ತಿ ಕಾಲೇಜು ವಿದ್ಯಾರ್ಥಿಯಲ್ಲ. ಹೊರಗಿನಿಂದ ಬಂದಿದ್ದ ಆತ ಮುಂಭಾಗದಲ್ಲಿ ನಿಂತಿದ್ದ ಮತ್ತು ನಿರಂತರವಾಗಿ ಆದಿತ್ಯ ನಾರಾಯಣ್ ಅವರ ಕಾಲನ್ನು ಎಳೆಯುತ್ತಿದ್ದ. ಪದೇ ಪದೆ ಕಿರಿಕಿರಿ ಮಾಡುತ್ತಿದ್ದ. ಅಲ್ಲದೆ ಆತ ಹಲವು ಬಾರಿ ತನ್ನ ಫೋನ್‌ನಿಂದ ಆದಿತ್ಯ ಅವರ ಕಾಲಿಗೆ ಹಲವು ಬಾರಿ ಹೊಡೆದಿದ್ದ. ಇದರಿಂದ ಆದಿತ್ಯ ತಾಳ್ಮೆ ಕಳೆದುಕೊಂಡರು. ಬಳಿಕ ಮೊಬೈಲ್ ಕಸಿದು ಎಸೆದಿದ್ದರುʼʼ ಎಂದು ವಿವರಿಸಿದ್ದಾರೆ.
ʼʼಆದಿತ್ಯ ನಾರಾಯಣ್ ವಿದ್ಯಾರ್ಥಿಗಳ ಜತೆಗೆ ಕನಿಷ್ಠ 200 ಸೆಲ್ಫಿಯನ್ನಾದರೂ ತೆಗೆಸಿಕೊಂಡಿದ್ದಾರೆ. ಈ ಘಟನೆ ಹೊರತು ಪಡಿಸಿದರೆ ಸಂಗೀತ ಕಾರ್ಯಕ್ರಮ ಉತ್ತಮವಾಗಿ ನಡೆದಿದೆ. ಇದಾದ ಬಳಿಕವೂ ಸುಮಾರು 2 ಗಂಟೆಗಳ ಕಾಲ ಕಾರ್ಯಕ್ರಮ ಮುಂದುವರಿದಿತ್ತು. ಒಂದು ವೇಳೆ ಆ ವ್ಯಕ್ತಿಯ ಭಾಗದಿಂದ ತಪ್ಪು ನಡೆಯದಿದ್ದರೆ ಧೈರ್ಯದಿಂದ ಮುಂದೆ ಬಂದು ಮಾತನಾಡುತ್ತಿದ್ದʼʼ ಎಂದು ಆಯೋಜಕರು ತಿಳಿಸಿದ್ದಾರೆ.
eedi kosam malli stage daggara pass konnad aadu evado😂
— 𝚁𝙰𝙹𝙸𝙽𝙸❤️🔥🔱 (@UnifiedTFI) February 12, 2024
Shameless act #AdityaNarayan https://t.co/yGJM3JjVuk
ʼʼಇಂತಹ ಘಟನೆಗಳಿಂದ ಬೇಸತ್ತ ಗಾಯಕ ದರ್ಶನ್ ರಾವಲ್ ಕಾಲೇಜು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಾರೆ. ಈ ರೀತಿಯ ಘಟನೆ ಪ್ರತಿ ನಗರದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಜನರಿಗೆ ಘಟನೆಯ ಹಿಂದಿನ ಸತ್ಯ ತಿಳಿದಿರುವುದಿಲ್ಲ. ಒಂದು ಕಡೆಯಿಂದ ಮಾತ್ರ ಚಿಂತಿಸುತ್ತಾರೆ. ನಿರಂತರ ಕಾಲು ಎಳೆಯುತ್ತಲೇ ಇದ್ದರೆ ಆದಿತ್ಯ ನೆಲಕ್ಕೆ ಬಿದ್ದು ಬಿಡುವ ಅಪಾಯವೂ ಇತ್ತು. ಆ ವ್ಯಕ್ತಿ ಮಾಡಿದ್ದು ಸರಿ ಎಂದಾದರೆ ಸಂಬಂಧಪಟ್ಟ ಕಾಲೇಜು ಅಧಿಕಾರಿಗಳನ್ನು ಸಂಪರ್ಕಿಸಬೇಕಿತ್ತು. ನಾನು ಕಾಲೇಜು ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ಇದುವರೆಗೆ ಇಂತಹ ಉತ್ತಮ ಸಂಗೀತ ಕಾರ್ಯಕ್ರಮ ನಡೆದಿದರಲಿಲ್ಲ ಎಂದು ಅವರೇ ತಿಳಿಸಿದ್ದಾರೆʼʼ ಎಂದು ಆಯೋಜಕರು ಹೇಳಿದ್ದಾರೆ.
ಇದನ್ನೂ ಓದಿ: Aditya Narayan: ಕಾರ್ಯಕ್ರಮ ವೇಳೆ ಅಭಿಮಾನಿಯನ್ನು ಹೊಡೆದು ಮೊಬೈಲ್ ಕಸಿದು ಎಸೆದ ಖ್ಯಾತ ಗಾಯಕ!
ಏನಿದು ಘಟನೆ?
ಆದಿತ್ಯ ಅವರ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ರಗ್ತ ಆರ್ 2 ಕಾಲೇಜಿನಲ್ಲಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಆದಿತ್ಯ ಅವರು ಶಾರುಖ್ ಖಾನ್ ಅವರ `ಡಾನ್’ ಸಿನಿಮಾದ ʻಆಜ್ ಕಿ ರಾತ್ʼ ಹಾಡಿನ ಪ್ರದರ್ಶನ ನೀಡುತ್ತಿದ್ದರು. ಹಾಡುತ್ತ ಅವರು ಸ್ಟೇಜ್‌ನ ಅಂಚಿಗೆ ಬಂದು ಅಭಿಮಾನಿಗಳತ್ತ ನೋಡಿದರು. ಬಳಿಕ ವ್ಯಕ್ತಿಯೊಬ್ಬನ ಕೈಯಿಂದ ಮೊಬೈಲ್ ಕಸಿದು ದೂರಕ್ಕೆ ಎಸೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಇದಕ್ಕಾಗಿ ಹಲವರು ಆದಿತ್ಯ ಅವರನ್ನು ಟೀಕಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ