ಮುಂಬೈ: ಅದು 1993ರ ಕಾಲ. ಪಾಕಿಸ್ತಾನ ಮೂಲ ಭಾರತ ವಾಸಿ ಗಾಯಕ ಅದ್ನಾನ್ ಸಮಿ (Adnan Sami) ಮತ್ತು ಪಾಕಿಸ್ತಾನಿ ನಟಿ ಝೆಬಾ ಭಕ್ತಿಯಾರ್ ಪ್ರೀತಿಸಿ ವಿವಾಹವಾಗಿದ್ದರು. ಅದೇ ವರ್ಷದಂದು ಅವರಿಗೆ ಅಜಾನ್ ಸಮಿ ಖಾನ್ ಹೆಸರಿನ ಮಗ ಕೂಡ ಜನಿಸಿದ್ದ. ಆದರೆ ಅವರ ವಿವಾಹ 1997ಕ್ಕೆ ಅಂತ್ಯವಾಗಿತ್ತು. ಆ ಸಮಯದಲ್ಲಿ ಮಗ ಯಾರ ಬಳಿ ಇರಬೇಕು ಎನ್ನುವ ವಿಚಾರದಲ್ಲಿ ಇಬ್ಬರೂ ಹಲವಾರು ತಿಂಗಳುಗಳ ಕಾಲ ನ್ಯಾಯಾಲಯದ ಮೆಟ್ಟಿಲು ಹತ್ತಿಳಿದಿದ್ದರು. ಅದರ ಕುರಿತಾಗಿ ಇತ್ತೀಚೆಗೆ ಝೆಬಾ ಅವರು ಮಾತನಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ಝೆಬಾ ಅವರು ತಮ್ಮ ಮತ್ತು ಅದ್ನಾನ್ ಅವರ ದಾಂಪತ್ಯದ ಕುರಿತಾಗಿ ಮಾತನಾಡಿದ್ದಾರೆ. “ಅದ್ನಾನ್ ಅನ್ನು ಮದುವೆಯಾಗುವ ಸಮಯಕ್ಕೆ ನನ್ನ ಕೆಲವು ಸಿನಿಮಾಗಳು ಮುಗಿಯುವ ಹಂತದಲ್ಲಿದ್ದವು. ಅದಾದ ಮೇಲೆ ನಾನು ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿರಲಿಲ್ಲ. ಸಿನಿಮಾ ಕಥೆಗಳನ್ನು ಬರೆಯಬೇಕು, ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೆ. ಆದರೆ ಮದುವೆಯಾದ ಮೇಲೆ ಎಲ್ಲವೂ ನಿಂತಿತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video : ಲಿಫ್ಟ್ ಹತ್ತಿ ಯಾವ ಫ್ಲೋರ್‌ಗೆ ಹೋಗಬೇಕು ಎನ್ನುವುದನ್ನೂ ಹೇಳುತ್ತದೆ ಈ ಬೆಕ್ಕು!
“ಎಲ್ಲಕ್ಕಿಂತಹ ದೊಡ್ಡ ಸಮಸ್ಯೆಯಾಗಿ ಕಂಡಿದ್ದು, ನನ್ನ ಮಗನನ್ನು ನನ್ನ ವಶಕ್ಕೆ ಪಡೆದುಕೊಳ್ಳುವುದು. ಅದಕ್ಕಾಗಿ 18 ತಿಂಗಳುಗಳ ಕಾಲ ಹೋರಾಟ ಮಾಡಬೇಕಾಯಿತು. ಅದು ನನಗೆ ತುಂಬಾ ಕಷ್ಟವಾದ ಸಮಯ. ಆಗ ನಾನು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಮನಸ್ಸಿಗೆ ನೆಮ್ಮದಿ ಬೇಕೆಂದರೆ ಕೆಲಸ ಮಾಡು ಎಂದು ನನ್ನ ಸ್ನೇಹಿತರು ಸಲಹೆ ಕೊಟ್ಟರು. ನನ್ನ ಸ್ನೇಹಿತನೊಬ್ಬ ಇಂಗ್ಲೆಂಡ್‌ನಲ್ಲಿ ಧಾರಾವಾಹಿ ಮಾಡುತ್ತಿದ್ದ. ನಾನು ಅದರಲ್ಲಿ ನಟಿಸಲು ಒಪ್ಪಿಕೊಂಡೆ. ಲಂಡನ್‌ನಲ್ಲಿ ಕೆಲಸ ಮಾಡಿದೆ” ಎಂದು ನಟಿ ಹೇಳಿದ್ದಾರೆ.
“ನನ್ನ ಮಗ ನನ್ನ ವಶಕ್ಕೆ ಸಿಕ್ಕ ನಂತರ ನೆಮ್ಮದಿ ಸಿಕ್ಕಂತಾಯಿತು. ಆಮೇಲೆ ನಾನು ಕೆಲಸಗಳಲ್ಲಿ ತೊಡಗಿಕೊಳ್ಳಲಾರಂಭಿಸಿದೆ” ಎಂದು ನಟಿ ಹಿಂದಿನ ಘಟನೆ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮೆಟ್ರೊ ರೈಲಲ್ಲಿ ಎ.ಸಿ ಚಳಿ ತಾಳದೆ ಗೆಳತಿಗೆ ಬಿಸಿ ಮುತ್ತು ನೀಡಿದ ಯುವಕ; ಕಣ್ಣಲ್ಲೇ ಕೊಂದಳು ಯುವತಿ
ಅದ್ನಾನ್ ಸಮಿ ಅವರಿಗೆ ಝೆಬಾ ಅವರೊಂದಿಗೆ ಮೊದಲನೇ ಮದುವೆಯಾಗಿತ್ತು. ಆದರೆ ಝೆಬಾ ಅವರಿಗೆ ಅದು ಮೂರನೇ ಮದುವೆಯಾಗಿತ್ತು. ಅವರು ಅದ್ನಾನ್‌ಗೂ ಮೊದಲು ಭಾರತೀಯ ನಟ ಜಾವೇದ್ ಜಾಫ್ರಿ ಅವರನ್ನು ವರಿಸಿದ್ದರು. ಅದ್ನಾನ್ ಜತೆ ವಿವಾಹ ಮುರಿದುಕೊಂಡ ನಂತರ ಅವರು 2008ರಲ್ಲಿ ಸೊಹೈಲ್ ಖಾನ್ ಲೆಘಾರಿ ಅವರೊಂದಿಗೆ ವಿವಾಹವಾಗಿದ್ದರು.