ಮುಂಬೈ: ಅದ್ನಾನ್ ಸಮಿ (Adnan Sami) ಬಾಲಿವುಡ್‌ನಲ್ಲಿ ಎಲ್ಲರಿಗೂ ತಿಳಿದಿರುವ ಹೆಸರು. ಹಾಡಿನ ಮೂಲಕವೇ ಮೋಡಿ ಮಾಡುವ ಈ ಗಾಯಕ ಇದೀಗ ಪ್ರಸಿದ್ಧ ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರ ನೆನಪನ್ನು ಮೆಲುಕು ಹಾಕಿದ್ದಾರೆ. ದೇವತೆ ಎಂದು ಪೂಜಿಸುತ್ತಿದ್ದ ಅವರೊಂದಿಗೆ ತಾವು ಕೆಲಸ ಮಾಡಿದ ಅನುಭವನನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Singer Kumar Sanu: ಪ್ರಸಿದ್ಧ ಗಾಯಕ ಕುಮಾರ್ ಸಾನು ನಿಜವಾದ ಹೆಸರೇ ಬೇರೆ; ಮರುನಾಮಕರಣಕ್ಕೂ ಇತ್ತು ಕಾರಣ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅದ್ನಾನ್, ಲತಾ ಅವರ ಕುರಿತಾಗಿ ಮಾತನಾಡಿದ್ದಾರೆ. “ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ʼಭರ್ ದೋ ಜೋಲಿʼ ಹಾಡನ್ನು ಹಾಡಿದ್ದೆ. ಅದು ಬಿಡುಗಡೆಯಾದ ಮಾರನೇ ದಿನವೇ ಲತಾ ಮಂಗೇಶ್ಕರ್ ಅವರು ನನಗೆ ಕರೆ ಮಾಡಿದರು. ಹಾಡು ಚೆನ್ನಾಗಿದೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು” ಎಂದು ಅವರು ಹೇಳಿಕೊಂಡಿದ್ದಾರೆ.
“ನನ್ನ ತಂದೆ ಲತಾ ಮಂಗೇಶ್ಕರ ಅವರ ದೊಡ್ಡ ಅಭಿಮಾನಿ. ಪ್ರತಿ ದಿನ ರಾತ್ರಿ ಮಲಗುವಾಗ ಅವರು ಲತಾ ಅವರ ಧೀರೆ ಸೆ ಆಜಾ ರಿ ಹಾಡನ್ನು ಕೇಳಿಕೊಂಡೇ ಮಲಗುತ್ತಿದ್ದರು. ಬಾಲ್ಯದಿಂದಲೂ ನನಗೆ ಲತಾ ಅವರು ಸಂಗೀತ ದೇವತೆ ರೀತಿಯಲ್ಲೇ ಕಾಣಿಸಿದ್ದರು. ಭಾರತಕ್ಕೆ ತೆರಳಿ ಲತಾ ಅವರನ್ನು ಭೇಟಿಯಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದೆ. 2005ರಲ್ಲಿ ಸಲ್ಮಾನ್ ಖಾನ್ ಅವರ ʼಲಕ್ಕಿ: ನೋ ಟೈಮ್ ಫಾರ್ ಲವ್ʼ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಿದೆ. ಅದರಲ್ಲಿನ ʼಏಕ್ ಅಜ್ನಬೀ ಸ ಏಹಾಸ್ ದಿಲ್ ಕೊ ಬತಾಯೆʼ ಹಾಡಿಗೆ ಲತಾ ಮೇಡಂ ಅವರೇ ಧ್ವನಿಯಾದರು. ಅವರೊಟ್ಟಿಗೆ ಕೆಲಸ ಮಾಡಿದ್ದು ನನಗೆ ಎಂದೆಂದಿಗೂ ನೆನಪಿನಲ್ಲಿರುವಂತಹ ವಿಚಾರ” ಎಂದು ಸಮಿ ಅವರು ಹೇಳಿಕೊಂಡಿದ್ದಾರೆ.