ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೇ ತಮ್ಮ ವಿಶೇಷ ಫ್ಯಾಷನ್ ಶೈಲಿ ಮತ್ತು ಸೌಂದರ್ಯದಿಂದ ಕೂಡ ಅನೇಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ನಿಮಗೂ ಐಶ್ವರ್ಯಾ ಅವರ ಫ್ಯಾಷನ್ ಶೈಲಿಯನ್ನು ಅನುಸರಿಸುವ ಆಸಕ್ತಿ ಇದ್ದರೆ, ನಟಿ ತಮ್ಮ ಬಲಗೈಗೆ ಧರಿಸಿದ ವಿ-ಆಕಾರದ ವಜ್ರದ ಉಂಗುರದ ಬಗ್ಗೆ ತಿಳಿದುಕೊಳ್ಳಿ! ನಟಿ ಈ ಉಂಗುರವನ್ನು ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಹಾಗಾದ್ರೆ ನಟಿ ಧರಿಸಿದ ಈ ಉಂಗುರದ ವಿಶೇಷತೆ ಏನು ಎಂಬುದನ್ನು ತಿಳಿಯಿರಿ. ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿ” ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ಹಾಗಾಗಿ ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ ಮತ್ತು ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ. ಅವರ ಸಂಪ್ರದಾಯದಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಧರಿಸುವ ಹಾಗೇ ಈ ಉಂಗುರವನ್ನು ಧರಿಸಬೇಕಾಗುತ್ತದೆ.
ಬಂಟ ಸಮುದಾಯದ ಸಂಪ್ರದಾಯ
ಈ ಉಂಗುರವು ಹೆಚ್ಚಾಗಿ ಮಂಗಳೂರಿನ ಬಂಟ ಸಮುದಾಯದವರು ಧರಿಸುತ್ತಾರೆ. ಈ ಉಂಗುರವು ವಿವಾಹಿತ ಮಹಿಳೆಯರು ಮತ್ತು ನವ ವಧುವನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸುತ್ತದೆ ಎಂಬುದು ಬಂಟ ಸಮುದಾಯದ ನಂಬಿಕೆಯಾಗಿದೆ. ಬಂಟ ಸಮುದಾಯಕ್ಕೆ ಸೇರಿದ ನಟಿ ಐಶ್ವರ್ಯ ರೈ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ಸಮುದಾಯದ ಸಂಪ್ರದಾಯದಂತೆ ಯಾವಾಗಲೂ ತನ್ನ ಕೈಯಲ್ಲಿ ವಂಕಿ ಉಂಗುರವನ್ನು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಉಂಗುರವನ್ನು ಬಂಟ ಸಮುದಾಯ ಮಾತ್ರವಲ್ಲದೇ ದಕ್ಷಿಣ ಭಾರತದ ಸಮುದಾಯದ ಅನೇಕ ವಿವಾಹಿತ ಮಹಿಳೆಯರು ಧರಿಸುತ್ತಾರೆ.
ಇದನ್ನೂ ಓದಿ: Bollywood Cinema: ಜೀವನ ಪ್ರೀತಿಯ ತೀವ್ರತೆ ಸಾರಿದ 5 ಬಾಲಿವುಡ್ ಚಿತ್ರಗಳಿವು
ಹಲವಾರು ವಿನ್ಯಾಸಗಳಲ್ಲಿ ಲಭ್ಯ:
ಈ ವಂಕಿ ಉಂಗುರವು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ, ಉದಾಹರಣೆಗೆ ವಿ-ಆಕಾರದ ತೆಳುವಾದ ಚಿನ್ನದ ಬ್ಯಾಂಡ್ ಅಥವಾ ನಟಿ ಐಶ್ವರ್ಯ ರೈ ಧರಿಸಿದಂತೆ ವಜ್ರದ ಬ್ಯಾಂಡ್ ನಲ್ಲಿ ಸಿಗುತ್ತದೆ. ಈ ಉಂಗುರವನ್ನು ಮಂಗಳೂರಿನ ವಿವಾಹಿತ ಮಹಿಳೆಯರು ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸುತ್ತಾರೆ. ಇದರಿಂದ ಅವರು ವಿವಾಹಿತರು ಎಂದು ಹೇಳುತ್ತಾರೆ. ಅಲ್ಲದೇ ಈ ಉಂಗುರವು ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ವೈವಾಹಿಕ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ ಈ ಉಂಗುರ ವಿಶೇಷವಾಗಿ ಗಮನ ಸೆಳೆದಿದೆ.