ಬೆಂಗಳೂರು : ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್‌ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್, ಸಿಂಗರ್, ಕಂಪೋಸರ್ ALL OK ಅಲಿಯಾಸ್ ಅಲೋಕ್ ಸದ್ದಿಲ್ಲದೆ ಮತ್ತೊಂದು ವಿಡಿಯೋ ಸಾಂಗ್ ಹೊರತಂದಿದ್ದಾರೆ. ಇದೀಗ ತತ್ವಪದಕಾರ ಶಿಶುನಾಳ ಶರೀಫ ಅವರ ʼಸೋರುತಿಹುದು ಮನಿಯ ಮಾಳಿಗಿ’ (Soruthihudu Maniya Maligi) ತತ್ವಪದಕ್ಕೆ ರ‍್ಯಾಪರ್ ಸ್ಪರ್ಶ ನೀಡಿದ್ದಾರೆ.
ಇದೇ ಹಾಡಿಗೆ ರಘು ದೀಕ್ಷಿತ್ ಕೂಡ ವೆಸ್ಟರ್ನ್ ಸಾಂಗ್ ಸ್ಟೈಲ್‌ನಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದರು. ಶಿಶುನಾಳ ಶರೀಫರಂತಹ ಅನುಭಾವಿ ಕೃತಿಕಾರರ ಕೃತಿಗಳು ಹೊಸತನದಿಂದ ಮೂಡಿಬರುತ್ತಿವೆ ಎಂದು ಕನ್ನಡಿಗರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದ ಮಟ್ಟಿಗೆ ಹೊಸತನ, ವಿಶೇಷತನದಿಂದ ಕೂಡಿರುವ ʼಸೋರುತಿಹುದು ಮನಿಯ ಮಾಳಿಗಿ’ ಆಲ್ಬಂ ಹಾಡಿನಲ್ಲಿ ಅಜ್ಞಾನ ನಿವಾರಿಸಿಕೊಳ್ಳುವ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಸಾಹಿತ್ಯ, ಸಂಗೀತ, ನಿರ್ಮಾಣ-ನಟನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬ್ಲಾಕ್ ಆ್ಯಂಡ್ ವೈಟ್ ಥೀಮ್‌ನಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಆಲ್ ಓಕೆ ಕಾಸ್ಟ್ಯೂಮ್ ಸ್ಟೈಲ್, ಲೊಕೇಷನ್, ಮೇಕಿಂಗ್ ಎಲ್ಲವೂ ಅದ್ಧೂರಿಯಾಗಿ ಮೂಡಿ ಬಂದಿವೆ.
ಸಂತ ಶಿಶುನಾಳ ಶರೀಫರ ಹಾಡಿನಿಂದ ಸ್ಫೂರ್ತಿ ಪಡೆದು ತಯಾರಿಸಿರುವ ಹಾಡಿಗೆ ರಾಜಾ ರಾಮ್ ರಾಜೇಂದ್ರನ್ ನಿರ್ದೇಶನ ಹಾಗೂ ಛಾಯಾಗ್ರಹಣ, ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದ 19 ವರ್ಷಗಳಿಂದ ಕನ್ನಡ ರ‍್ಯಾಪ್ ದುನಿಯಾದಲ್ಲಿ ತಮ್ಮದೇ ಸ್ಟೈಲ್ ಕ್ರಿಯೇಟ್ ಮಾಡಿರುವ ಆಲ್ ಓಕೆ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದಾರೆ.
ಈ ಹಿಂದೆ ಹವಾ ಸೃಷ್ಟಿ ಮಾಡಿರುವ all Ok
ʼಮನೆಯಲ್ಲೇ ಪಾರ್ಟಿ ಮಾಡಿʼ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಅಲೋಕ್ ಹಿಂದೆ ಮಾಡಿದ್ದರು. ಆಲ್ ಓಕೆ (All Ok) ಎಂಬ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಅವರು ಈಗಾಗಲೇ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ. ‘ಡೋಂಟ್ ವರಿ’, ‘ಹ್ಯಾಪಿ ಆಗಿದೆ’, ‘ಮಾರಮ್ಮನ ಡಿಸ್ಕೋ’, ‘ಯಾಕಿಂಗೆ ಮಗಾ ಯಾಕಿಂಗೆ’ ಮುಂತಾದ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಇವುಗಳ ಮೂಲಕ ಆಲ್ ಓಕೆ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು.