ಮುಂಬೈ: ನಟಿ ಅಲಿಯಾ ಭಟ್ (Alia Bhatt) ಈಗಾಗಲೇ ಭಾರತದ ಹಲವರ ಮನಸ್ಸು ಗೆದ್ದಿರುವ ನಟಿ. 2022ರಲ್ಲಿ ನಟಿ ಹಿಂದಿ ಚಿತ್ರೋದ್ಯಮದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇದೀಗ ಅಲಿಯಾ ಹಾಲಿವುಡ್‌ನಲ್ಲೂ ಮಿಂಚುವುದಕ್ಕೆ ಸಿದ್ಧವಾಗಿದ್ದಾರೆ. ಇಂಗ್ಲಿಷ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೂ ಮೊದಲು ನಟಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ.
ಹೌದು. ವಿಶ್ವದ ಸೆಲೆಬ್ರಿಟಿಗಳ ಅತ್ಯಂತ ದೊಡ್ಡ ಫ್ಯಾಷನ್ ಕಾರ್ಯಕ್ರಮವಾದ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇ 1ರಂದು ನಡೆಯಲಿದೆ. ಅದರಲ್ಲಿ ನಮ್ಮ ಬಾಲಿವುಡ್‌ನ ಬೆಡಗಿ ಅಲಿಯಾ ಭಟ್ ಅವರು ಕಾಣಿಸಿಕೊಳ್ಳಲಿದ್ದಾರೆ. ಅಮೆರಿಕದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿರುವ ಪ್ರಬಲ್ ಗುರುಂಗ್ ಅವರು ವಿನ್ಯಾಸ ಮಾಡಿರುವ ಉಡುಗೆಯಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಿದೆ. ನಟಿಯ ಈ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದ್ದು, ರೆಡ್ ಕಾರ್ಪೆಟ್ ಮೇಲೆ ಅವರನ್ನು ಕಾಣುವುದಕ್ಕೆ ಕಾತುರದಿಂದ ಕಾಯಲಾರಂಭಿಸಿದ್ದಾರೆ.
ಈ ಹಿಂದೆಯೂ ಬಾಲಿವುಡ್‌ನ ಅನೇಕ ನಟಿಯರು ಈ ಮೆಟ್ ಗಾಲಾದ ರೆಡ್ ಕಾರ್ಪೆಟ್‌ನಲ್ಲಿ ವಿಶೇಷವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ನತಾಶಾ ಅವರು ಸಬ್ಯಸಾಚಿ ಸೀರೆ ತೊಟ್ಟು ಅದರೊಂದಿಗೆ ಚಿನ್ನದ ಬಣ್ಣದ ಲೋಹದ ಕೋಟ್ ಧರಿಸಿ ಕಾಣಿಸಿಕೊಂಡಿದ್ದರು. ನಟಿಯ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹಾಗೆಯೇ 2017ರಲ್ಲಿ ದೀಪಿಕಾ ಪಡುಕೋಣೆ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಮೊದಲನೇ ಬಾರಿಗೆ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಮತ್ತೊಮ್ಮೆ ರೆಡ್ ಕಾರ್ಪೆಟ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆಗ ನಟಿ ಪ್ರಬಲ್ ಗುರುಂಗ್ ಅವರು ವಿನ್ಯಾಸ ಮಾಡಿದ್ದ ಕೆಂಪು ಬಣ್ಣದ ಉಡುಗೆ ತೊಟ್ಟಿದ್ದರು. ಒಂದು ಶೋಲ್ಡರ್‌ನ ಆ ಉಡುಗೆಯ ಫೋಟೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದನ್ನೂ ಓದಿ: Viral Video: ಹಿರಿಯ ನಟಿ ರೇಖಾರನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ತಬ್ಬಿಕೊಂಡ ಅಲಿಯಾ ಭಟ್
ಅದೇ ರೀತಿಯಲ್ಲಿ ಬಾಲಿವುಡ್‌ನ ಇನ್ನೋರ್ವ ನಟಿ ಪ್ರಿಯಾಂಕಾ ಚೋಪ್ರಾ ಅವರು 2017ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಈಗಿನ ಪತಿ ನಿಕ್ ಜೋನಾಸ್ ಅವರ ಜತೆಗೆ ಕಾಣಿಸಿಕೊಂಡಿದ್ದರು. ಉದ್ದನೆಯ ವೇಲು ರೀತಿಯಲ್ಲಿ ಬಟ್ಟೆ ಹೊಂದಿರುವ ಟ್ರೆಂಚ್ ಕೋಟ್ ಉಡುಗೆಯಲ್ಲಿ ನಟಿ ಮಿಂಚಿದ್ದರು.
ಅಲಿಯಾ ಭಟ್ ಅವರು 2022ರಲ್ಲಿ ಗಂಗೂಬಾಯಿ ಕಥಿಯಾವಾಡಿ, ಆರ್‌ಆರ್‌ಆರ್, ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಅವರು ಡಾರ್ಲಿಂಗ್ಸ್ ಸಿನಿಮಾಕ್ಕೆ ನಿರ್ಮಾಪಕಿಯಾಗಿಯೂ ಪಾದಾರ್ಪಣೆ ಮಾಡಿದ್ದರು.