ಮುಂಬೈ: ಆಲಿಯಾ ಭಟ್ (Alia Bhatt) ಬಾಲಿವುಡ್‌ನ ಬಹುಬೇಡಿಕೆಯ ನಟಿ. ಇತ್ತೀಚೆಗೆ ಬಿಡುಗಡೆಯಾದ ಈಕೆ ನಟಿಸಿರುವ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿದ್ದು, ಭಾರತದಲ್ಲಿ 100 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೆ ಆಲಿಯಾ ನಟನೆಯ ಸಿನಿಮಾಗಳಲ್ಲಿ ಈಗಾಗಲೇ ಹಲವು ಸಿನಿಮಾಗಳು 100 ಕೋಟಿಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ. ಅವುಗಳ ವಿವರ ಇಲ್ಲಿದೆ.
2 ಸ್ಟೇಟ್ಸ್
ಅಭಿಷೇಕ್ ವರ್ಮನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ 2 ಸ್ಟೇಟ್ಸ್. ಈ ಸಿನಿಮಾದಲ್ಲಿ ತಮಿಳುನಾಡಿನ ಹುಡುಗಿಯಾಗಿ ಆಲಿಯಾ ನಟಿಸಿದ್ದರೆ, ಪಂಜಾಬ್‌ನ ಯುವಕನ ಪಾತ್ರದಲ್ಲಿ ಅರ್ಜುನ್ ಕಪೂರ್ ನಟಿಸಿದ್ದಾರೆ. ಈ ಇಬ್ಬರ ನಡುವೆ ಪ್ರೀತಿ ಹುಟ್ಟಿ, ಎರಡೂ ಕುಟುಂಬಗಳನ್ನು ಒಪ್ಪಿಸಿ ಅವರಿಬ್ಬರು ಮದುವೆಯಾಗುವ ವಿಶೇಷವಾದ ಕಥೆ ಸಿನಿಮಾದಲ್ಲಿದೆ. ಈ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ ದೇಶಿಯ ಬಾಕ್ಸ್ ಆಫೀಸ್‌ನಲ್ಲಿ 102 ಕೋಟಿ ರೂ. ಗಳಿಸಿಕೊಂಡಿತು.
ಬದರಿನಾಥ್ ಕಿ ದುಲ್ಹನಿಯಾ
2017ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಸಿನಿಮಾ ಬದರಿನಾಥ್ ಕಿ ದುಲ್ಹನಿಯಾ. ಶಶಾಂಕ್ ಖೈತಾನ್ ನಿರ್ದೇಶನದ ಈ ಸಿನಿಮಾದಲ್ಲಿ ಆಲಿಯಾಗೆ ಜತೆಯಾಗಿ ವರುಣ್ ಧವನ್ ಅವರು ನಟಿಸಿದ್ದಾರೆ. ಈ ಸಿನಿಮಾ 116.68 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು.
ರಾಝಿ
ಮೇಘನಾ ಗುಲ್ಜಾರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಸಿನಿಮಾ ರಾಝಿ. ಮಹಿಳಾ ಪ್ರಧಾನ ಸಿನಿಮಾವಾಗಿರುವ ಇದು 2018ರಲ್ಲಿ ತೆರೆ ಕಂಡಿತು. ಸಿನಿಮಾದಲ್ಲಿ ನಟಿ ಆಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಟ ವಿಕ್ಕಿ ಕೌಶಲ್ ಅವರು ಜತೆಯಾಗಿದ್ದಾರೆ. ಆಲಿಯಾ ಅವರು ಭಾರತದ ಗೂಢಚಾರಳ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ದೇಶಾದ್ಯಂತ 123.84 ಕೋಟಿ ರೂ. ಗಳಿಸಿತು.
ಗಲ್ಲಿ ಬಾಯ್
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗಿಂತ ಮೊದಲು ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಜತೆಯಾಗಿ ನಟಿಸಿದ ಸಿನಿಮಾವೆಂದರೆ ಅದು ಗಲ್ಲಿ ಬಾಯ್. ಜೋಯಾ ಅಖ್ತರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ 2019ರಲ್ಲಿ ತೆರೆ ಕಂಡಿತು. ಈ ಸಿನಿಮಾ ದೇಶಾದ್ಯಂತ ಒಟ್ಟು 140.25 ಕೋಟಿ ರೂ. ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: Rani Kii Prem Kahaani: ಶೀಘ್ರದಲ್ಲೇ ಸೆಂಚುರಿಯತ್ತ ಆಲಿಯಾ-ರಣವೀರ್ ಸಿನಿಮಾ; 5ನೇ ದಿನದ ಕಲೆಕ್ಷನ್ ಎಷ್ಟು?
ಗಂಗೂಬಾಯಿ ಕಥಿಯಾವಾಡಿ
2022ರಲ್ಲಿ ಆಲಿಯಾ ಭಟ್ ದೊಡ್ಡ ಪ್ರಮಾಣದಲ್ಲಿ ಮಿಂಚಿದ ಚಿತ್ರ ಇದು. ಆ ವರ್ಷದಲ್ಲಿ ಬಿಡುಗಡೆಯಾದ ಅವರ ʼಗಂಗೂಬಾಯಿ ಕಥಿಯಾವಾಡಿʼ ಸಿನಿಮಾ ಭಾರಿ ಯಶಸ್ಸು ಕಂಡಿತು. ಆ ಸಿನಿಮಾ ದೇಶಾದ್ಯಂತ 129.10 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು. ಸಿನಿಮಾದಲ್ಲಿ ಆಲಿಯಾ ಭಟ್ 1950-60ರ ದಶಕದ ಮುಂಬೈನ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸಿದ್ದರು.
ಆರ್‌ಆರ್‌ಆರ್
ಅದೇ ರೀತಿಯಲ್ಲಿ 2022ರಲ್ಲಿ ಬಿಡುಗಡೆಯಾದ ಆರ್‌ಆರ್‌ಆರ್ ಸಿನಿಮಾದಲ್ಲಿ ಕೂಡ ಆಲಿಯಾ ಮಿಂಚಿದ್ದರು. ರಾಮ್‌ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ಈ ಸಿನಿಮಾ ಸಾವಿರ ಕೋಟಿ ರೂ. ಗಳಿಸಿಕೊಂಡಿತು. ಈ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.
ಬ್ರಹ್ಮಾಸ್ತ್ರ
ಆಲಿಯಾ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ನಟಿಸಿದ ಬ್ರಹ್ಮಾಸ್ತ್ರ ಸಿನಿಮಾ ಕೂಡ 2022ರಲ್ಲಿ ಬಿಡುಗಡೆಯಾಯಿತು. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾ ದೇಶಾದ್ಯಂತ 257.44 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು.