ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಜಪ ಜೋರಾಗಿದೆ. ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ. ಈಗಾಗಲೇ ಮಂದಿರದಲ್ಲಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗಿದೆ. ʻಪ್ರಾಣ ಪ್ರತಿಷ್ಠಾʼ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ಸೆಲೆಬ್ರಿಟಿಗಳು ಅಯೋಧ್ಯೆಗೆ ತೆರಳುತ್ತಿದ್ದಾರೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣಕ್ಕೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಜಾನೆ ಬಂದು ಇಳಿದರು. ಆಲಿಯಾ ಸೀರಿಯಲ್ಲಿ ಕಂಡರೆ, ರಣಬೀರ್ ಕಪೂರ್ ಬಿಳಿ ಕುರ್ತಾ ಹಾಗೂ ಧೋತಿಯಲ್ಲಿ ಮಿಂಚಿದ್ದಾರೆ.
ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಹೋಗುವ ಮೊದಲು ಇಬ್ಬರೂ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಅವರ ಜತೆ ರೋಹಿತ್ ಶೆಟ್ಟಿ ಕೂಡ ಇದ್ದರು. ಮಾಧುರಿ ದೀಕ್ಷಿತ್ ಅವರು ಹಳದಿ ಸೀರೆಯುಟ್ಟು ಎಂಟ್ರಿ ಕೊಟ್ಟಿದ್ದಾರೆ. ಪತಿ ಡಾ. ಶ್ರೀರಾಮ್ ನೆನೆಯೊಂದಿಗೆ ಅಯೋಧ್ಯೆಯ ಕಡೆಗೆ ಹೋಗುತ್ತಿದ್ದರು. ಪ್ರವೇಶ ದ್ವಾರದ ಕಡೆಗೆ ಹೋಗುವ ಮೊದಲು ಪೋಸ್ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನವನ್ನು ಸ್ವೀಕರಿಸಿದ್ದ ನಟ ಆಯುಷ್ಮಾನ್ ಖುರಾನಾ ಕೂಡ ಅದೇ ಸಮಯದಲ್ಲಿ ಇದ್ದರು. ಉಳಿದಂತೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಅಯೋಧ್ಯೆಗೆ ಬಂದಿಳಿದಿದ್ದಾರೆ.
ಇದನ್ನೂ ಓದಿ: Ram Mandir: ರಾಮ ಮಂದಿರ ʻಪ್ರಾಣ ಪ್ರತಿಷ್ಠಾಪನೆʼ ದಿನವೇ ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ!
ಕತ್ರಿನಾ ಗೋಲ್ಡನ್ ಸೀರೆಯಲ್ಲಿ ಮಿಂಚಿದರೆ, ವಿಕ್ಕಿ ಶೇರ್ವಾನಿ ಧರಿಸಿದ್ದರು. ಜಾಕಿ ಶ್ರಾಫ್ ಕೂಡ ರಾಮಮಂದಿರ ಸಮಾರಂಭಕ್ಕೆ ತೆರಳುತ್ತಿದ್ದಾರೆ. ಉದ್ಘಾಟನಾ ಸಮಾರಂಭದ ಮೊದಲು, ಜಾಕಿ ಮುಂಬೈ ರಾಮಮಂದಿರದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ರಜನಿಕಾಂತ್, ಧನುಷ್, ಮಧುರ್ ಭಂಡಾರ್ಕರ್, ಅನುಪಮ್ ಖೇರ್, ಕಂಗನಾ ರಣಾವತ್, ಶೆಫಾಲಿ ಶಾ, ಅನು ಮಲಿಕ್, ಲತಾ ಮಂಗೇಶ್ಕರ್ ಅವರ ಸೋದರಳಿಯ ಆದಿನಾಥ್ ಮಂಗೇಶ್ಕರ್, ಸೋನು ನಿಗಮ್, ಮನೋಹ್ ಜೋಶಿ, ರವಿ ಕಿಶನ್, ರಣದೀಪ್ ಹೂಡಾ ಮತ್ತು ವಿವೇಕ್ ಒಬೆರಾಯ್ ಅವರಂತಹ ಸೆಲೆಬ್ರಿಟಿಗಳು ಈಗಾಗಲೇ ತಲುಪಿದ್ದಾರೆ.
ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮುಹೂರ್ತವು ಕೇವಲ 84 ಸೆಕೆಂಡ್‌ಗಳಲ್ಲಿ ಮುಗಿಯುವ ಕಾರಣ ಇಷ್ಟು ಅವಧಿಯಲ್ಲಿಯೇ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆ 29 ನಿಮಿಷ ಹಾಗೂ 8 ಸೆಕೆಂಡ್‌ಗಳಿಂದ 12 ಗಂಟೆ 30 ನಿಮಿಷ ಹಾಗೂ 32 ಸೆಕೆಂಡ್‌ಗಳ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಾಗುತ್ತಿದೆ.ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಮಮಂದಿರ ಟ್ರಸ್ಟ್ ನೀಡಿರುವ ಪಾಸ್‌ಗಳ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.