ಬೆಂಗಳೂರು : ಎರಡೂವರೆ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಸ್ಟಾರ್ ದಂಪತಿ ಆಲಿಯಾ ಭಟ್(Alia Bhatt) ಮತ್ತು ರಣಬೀರ್ ಕಪೂರ್ ಸಿಹಿಸುದ್ದಿ ಹಂಚಿಕೊಂಡಿದ್ದರು. ಆಲಿಯಾ ಭಟ್ ಗರ್ಭಿಣಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಲ್ಟ್ರಾಸೌಂಡ್ ತಪಾಸಣೆಯ ಫೋಟೋವನ್ನೂ ಹಂಚಿಕೊಂಡು, “ನಮ್ಮ ಮಗು ಶೀಘ್ರದಲ್ಲೇ ಬರಲಿದೆ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಇದರ ಬೆನ್ನಲ್ಲೆ ನಟಿ ಆಲಿಯಾ ಭಟ್ ಶೂಟಿಂಗ್‌ಗೆ ಹಾಜರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಹಿ ಮಾಡಿದ ಸಿನಿಮಾಗಳ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಕುರಿತು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರು. ಇದೀಗ ತಮ್ಮ ಇನ್‌ಸ್ಟಾ ಖಾತೆ ಮೂಲಕ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸುವ ಮೂಲಕ ಆಲಿಯಾ ಕೊಟ್ಟ ಮಾತನ್ನು ಉಳಿಸಕೊಂಡಿದ್ದಾರೆ.
ಇದನ್ನೂ ಓದಿ | ಆಲಿಯಾ ಭಟ್ ಗರ್ಭಿಣಿ; ಮದುವೆಯಾಗಿ 2 ತಿಂಗಳಿಗೆ ಸಿಹಿಸುದ್ದಿ ಕೊಟ್ಟ ಸ್ಟಾರ್ ದಂಪತಿ
ಆಲಿಯಾ ಭಟ್ ʻಹಾರ್ಟ್ ಆಫ್ ಸ್ಟೋನ್ʼ ಸಿನಿಮಾ ಮೂಲಕ ಹಾಲಿವುಡ್‌ಗೆ ಹಾರಿದ್ದರು. ಆಲಿಯಾ ಕೂಡ ಹಾಲಿವುಡ್ ಸಿನಿಮಾಗೆ ಸಹಿ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದರು. ಹಾಲಿವುಡ್ ಸಿನಿಮಾದ ಚಿತ್ರೀಕರಣ ಇನ್ನೂ ಬಾಕಿ ಇರುವಾಗಲೇ ಆಲಿಯಾ ತಾನು ಗರ್ಭಿಣಿ ಎಂದಿದ್ದರು. ಆದರೂ ಚಿತ್ರೀಕರಣ ಸಂಪೂರ್ಣ ಮಾಡಿದ್ದಾರೆ.
ಈ ಬಗ್ಗೆ ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರೀಕರಣ ಮುಗಿಸಿದ ಸಂತಸವನ್ನು ಹಂಚಿಕೊಂಡಿದ್ದಾರೆ, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಆಲಿಯಾ, ʻʻಹಾರ್ಟ್ ಆಫ್ ಸ್ಟೋನ್, ನೀವೆಲ್ಲರೂ ನನ್ನ ಹೃದಯದಲ್ಲಿದ್ದೀರಾ. ಗಾಲ್ ಗಾಡೋಟ್ ಅವರಿಗೆ ಧನ್ಯವಾದಗಳು. ನಿರ್ದೇಶಕ ಟಾಮ್ ಹಾರ್ಪರ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇಡೀ ತಂಡದ ಜತೆಗಿನ ಅನುಭವ ಮರೆಯಲು ಸಾಧ್ಯವಿಲ್ಲ. ನಾನು ಪಡೆದ ಪ್ರೀತಿ ಮತ್ತು ಕಾಳಜಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಬಾಲಿವುಡ್‌ನಲ್ಲಿ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದ ಚಿತ್ರೀಕರಣ ಮುಗಿಸಬೇಕಿದೆ. ಈಗಾಗಲೇ ಬ್ರಹ್ಮಾಸ್ತ್ರ ಮತ್ತು ಡಾರ್ಲಿಂಗ್ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಜ್ಜಾಗಿವೆ.
ಇದನ್ನೂ ಓದಿ | Brahmastra: ಕನ್ನಡದಲ್ಲೇ ಟ್ವೀಟ್ ಮಾಡಿದ ಆಲಿಯಾ : ಶಿವನ ಅವತಾರದಲ್ಲಿ ರಣಬೀರ್ ಕಪೂರ್