ಬೆಂಗಳೂರು: ಆಲಿಯಾ ಭಟ್ (Aliya Bhat) ತನ್ನ ಮನೆಯೊಳಗೆ ಕುಳಿತಿರುವ ಚಿತ್ರಗಳನ್ನು ಪಕ್ಕದ ಕಟ್ಟಡದಿಂದ ಜೂಮ್ ಲೆನ್ಸ್ ಮೂಲಕ ಕ್ಲಿಕ್ ಮಾಡಿದ ಮಾಧ್ಯಮ ಪೋರ್ಟಲ್‌ವೊಂದರ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಆಲಿಯಾ ಭಟ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಇನ್ನಿತ್ತರ ಬಿ-ಟೌನ್ ಸ್ಟಾರ್‌ಗಳು ಸೋಷಿಯಲ್ ಮೀಡಿಯಾ ಮೂಲಕ ತಮಗಾಗಿರುವ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ಅವರು ತಮ್ಮ ನಿವಾಸದಲ್ಲಿದ್ದರು. ಈ ವೇಳೆ ಪಕ್ಕದ ಟೆರೇಸ್ ಏರಿದ ಪಾಪರಾಜಿಗಳು ಆಲಿಯಾ ಭಟ್ ಅವರ ಫೋಟೊವನ್ನು ಕದ್ದು ತೆಗೆದಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಆಲಿಯಾ ಭಟ್, ‘ನಾನು ನನ್ನ ಮನೆಯಲ್ಲಿ ಕುಳಿತಿದ್ದೆ. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಎನಿಸಿತು. ಈ ಕಾರಣಕ್ಕೆ ಹೊರಗೆ ನೋಡಿದೆ. ಪಕ್ಕದ ಕಟ್ಟಡದಲ್ಲಿ ಇಬ್ಬರು ನನ್ನ ಕಡೆ ಕ್ಯಾಮೆರಾ ಆನ್ ಮಾಡಿ ನಿಂತಿದ್ದರು. ಇದು ಯಾವ ರೀತಿಯಲ್ಲಿ ಓಕೆ? ಇದು ಖಾಸಗಿತನಕ್ಕೆ ತಂದ ಧಕ್ಕೆ. ಯಾವಾಗಲೂ ಲೈನ್ ಕ್ರಾಸ್ ಮಾಡಬಾರದು. ಆದರೆ, ಆ ಲೈನ್ ಈಗ ಕ್ರಾಸ್ ಆಗಿದೆ’ ಎಂದು ಆಲಿಯಾ ಭಟ್ ಆಕ್ರೋಶ ಹೊರಹಾಕಿದ್ದಾರೆ. ಆಲಿಯಾ ಆರೋಪ ಮಾಡಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬಿ ಟೌನ್ ತಮ್ಮ ಅನಿಸಿಕೆಯನ್ನು ಹೊರಹಾಕಿದೆ. ಅನುಷ್ಕಾ ಶರ್ಮಾ ಇನ್‌ಸ್ಟಾ ಸ್ಟೋರಿಯಲ್ಲಿ ಈ ಬಗ್ಗೆ ʻʻ”ಅವರು ಇದನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಸುಮಾರು ಎರಡು ವರ್ಷಗಳ ಹಿಂದೆ ನಾವು ಕೂಡ ಇದೇ ಪರಿಸ್ಥಿತಿ ಎದುರಿಸಿದ್ದೆವು. ಮಗಳು ವಾಮಿಕಾ ಫೋಟೊವನ್ನು ಇದೇ ರೀತಿ ವೈರಲ್ ಮಾಡಿದ್ದರು. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ” ಎಂದು ಪೋಸ್ಟ್ ಮಾಡಿದ್ದಾರೆ.
ಜಾನ್ವಿ ಕಪೂರ್ ಪೋಸ್ಟ್ ಮಾಡಿ ‘ಅಸಹ್ಯ ಅನಿಸುತ್ತಿದೆ. ಈ ಪ್ಯಾಪರಾಜಿಗಳು ನನ್ನ ವಿಚಾರದಲ್ಲೂ ಈ ರೀತಿ ತಪ್ಪು ಮಾಡಿದ್ದಾರೆ. ಪ್ರತಿನಿತ್ಯ ನಾನು ಜಿಮ್‌ಗೆ ಹೋಗುವೆ ಆಗ ನನಗೆ ತಿಳಿಯದ ಹಾಗೆ ಜಿಮ್ ಗ್ಲಾಸ್ ಬಾಗಿಲಿನಿಂದ ಫೋಟೊ ಕ್ಲಿಕ್ ಮಾಡಿದ್ದಾರೆ. ಆ ಜಾಗದಲ್ಲಿ ಯಾರಿಗೂ ಫೋಟೋಟೊ ಕ್ಲಿಕ್ ಮಾಡಿಸಿಕೊಳ್ಳುವ ಆಸೆ ಇರುವುದಿಲ್ಲ ಏಕೆಂದರೆ ಅದು ಪ್ರೈವೇಟ್ ಜಾಗ. ನಿಮ್ಮ ಕೆಲಸ ನಮಗೆ ಅರ್ಥವಾಗುತ್ತದೆ ನೀವು ನಿಮ್ಮ ಕೆಲಸ ಮಾಡಬೇಕು ಮಾಡುತ್ತಿದ್ದೀರಿ. ಆದರೆ ಇರದಲ್ಲಿ ಪರಸ್ಪರ ಮಾತುಕತೆ ಇರಬೇಕು. ನಮಗೆ ಮುಜುಗರ ಮಾಡುವಂತೆ ಫೋಟೊ ಕ್ಲಿಕ್ ಮಾಡುವುದು ತಪ್ಪು. ತಪ್ಪು ಮಾಡಿ ಅದನ್ನು ಎಕ್ಸ್‌ಕ್ಲೂಸಿವ್ ಎಂದು ಎಂದು ಬರೆದುಕೊಳ್ಳುವುದು ದೊಡ್ಡ ತಪ್ಪು’ ಎಂದು ಬರೆದುಕೊಂಡಿದ್ದಾರೆ.
ಅರ್ಜುನ್ ಕಪೂರ್ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದು ʻʻನಾಚಿಕೆಯಾಗಬೇಕು. ಮಹಿಳೆ ತನ್ನ ಸ್ವಂತ ಮನೆಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ ಹೇಗೆ? ಇದು ಎಲ್ಲ ಮಿತಿಗಳನ್ನು ಮೀರುವಂತಿದೆ. ಮಾಧ್ಯಮಗಳ ಮೇಲೆ ಅಪಾರ ನಂಬಿಕೆ ಮತ್ತು ಹೊಂದಿರುವ ಕಲಾವಿದರು ನಾವು. ಹೀಗಿರುವಾಗ ನಮ್ಮ ಫೋಟೊಗಳನ್ನು ಕ್ಲಿಕ್ ಮಾಡಿ ಹೊಟ್ಟೆ ಪಾಡು ನೋಡಿಕೊಳ್ಳುವವರು ನೀವು, ಬೆಲೆ ಇಲ್ಲವೇ? ಎಂದು ಬರೆದುಕೊಂಡಿದ್ದಾರೆ.
ಕರಣ್ ಜೋಹರ್ ಸಹ ಬರೆದಿದ್ದಾರೆ, “ಇದು ಅಸಹ್ಯಕರವಾದ ಸಂಗತಿ. ಮನರಂಜನಾ ಉದ್ಯಮದ ಪ್ರತಿಯೊಬ್ಬರೂ ಪಾಪರಾಜಿಗಳ ಆಕ್ರಮಣ ಹೆಚ್ಚಾಗುತ್ತಿದೆ. ಆದರೆ ಒಂದು ಮಿತಿ ಇರಬೇಕು. ತಮ್ಮ ಸ್ವಂತ ಮನೆಗಳಲ್ಲಿ ಸುರಕ್ಷಿತವಾಗಿರಲು ಹಕ್ಕು ಇಲ್ಲವಂತಾಗಿದೆ! ಇದು ನಟರು ಅಥವಾ ಸೆಲೆಬ್ರಿಟಿಗಳ ಬಗ್ಗೆ ಅಲ್ಲ, ಇದು ಮೂಲಭೂತ ಮಾನವ ಹಕ್ಕುʼʼಎಂದು ಬರೆದುಕೊಂಡಿದ್ದಾರೆ. ಆಲಿಯಾ ಭಟ್ ಸದ್ಯ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ.