Site icon Vistara News

Allu Arjun: ಇಂದು ಅಲ್ಲು ಅರ್ಜುನ್ ಬರ್ತ್‌ಡೇ: ನಟನಾಗದಿದ್ರೆ ಏನಾಗ್ತಿದ್ದರು ಬನ್ನಿ?

Allu Arjun

Allu Arjun

ಬೆಂಗಳೂರು: ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್ (Allu Arjun) ಅವರಿಗೆ ಇಂದು (ಏಪ್ರಿಲ್‌ 8) ಜನುಮದಿನದ ಸಂಭ್ರಮ. ಇಡೀ ತೆಲುಗು ಚಿತ್ರರಂಗದಲ್ಲಿಯೇ ಸೂಪರ್‌ಸ್ಟಾರ್‌ ಆಗಿ ಬೆಳೆದ ಅಲ್ಲು, ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ಆನಿಮೇಟರ್ ಆಗಲು ಬಯಸಿದ್ದರಂತೆ. ಈ ಬಗ್ಗೆ ಸಂದರ್ಶನದಲ್ಲಿ ನಟ ಮನಬಿಚ್ಚಿ ಮಾತನಾಡಿದ್ದರು. ಅಲ್ಲು ಅರ್ಜುನ್ ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ಅವರ ಮಗ. 2003ರ ತೆಲುಗು ರೊಮ್ಯಾಂಟಿಕ್ ಸಿನಿಮಾ ʻಗಂಗೋತ್ರಿʼಯಲ್ಲಿ ಪ್ರಮುಖ ಪಾತ್ರದೊಂದಿಗೆ ನಟನೆಯನ್ನು ಪ್ರಾರಂಭಿಸಿದರು. ಈ ಸಿನಿಮಾವನ್ನು ಕೆ.ರಾಘವೇಂದ್ರ ರಾವ್ ನಿರ್ದೇಶಿಸಿದ್ದರು. ಬಳಿಕ ಅವರು ತೆಲುಗು ಚಿತ್ರರಂಗ ಮಾತ್ರವಲ್ಲ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸೂಪರ್‌ ಸ್ಟಾರ್‌ ಆಗಿ ಜನಪ್ರಿಯತೆ ಗಳಿಸಿದ್ದಾರೆ.

2020ರ ಸಂದರ್ಶನವೊಂದರಲ್ಲಿ, ಅಲ್ಲು ಅರ್ಜುನ್‌ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದರು. ʻʻಆರಂಭದಲ್ಲಿ, ನಾನು ಆನಿಮೇಟರ್ ಆಗಬೇಕೆಂದು ಬಯಸಿದ್ದೆ. ಆದರೆ ಕ್ರಮೇಣ ಸಿನಿಮಾ ಕಡೆ ಆಸಕ್ತಿ ಹೆಚ್ಚಾಯಿತು. ನೀವು ಸಿನಿಮಾ ಆಸಕ್ತ ಕುಟುಂಬದಲ್ಲಿ ಜನಸಿದ್ದರೆ, ಕ್ರಮೇಣ ನೀವೂ ಅದರ ಕಡೆ ಪ್ರಭಾವಿತರಾಗುತ್ತೀರಿ. ಇದೇ ಕಾರಣಕ್ಕೆ ನನಗೂ ಸಿನಿಮಾ ಕ್ಷೇತ್ರದತ್ತ ಆಸಕ್ತಿ ಬೆಳೆದು, ಆನಿಮೇಟರ್ ಆಗುವತ್ತ ಆಸಕ್ತಿ ಕಡಿಮೆಯಾಯಿತುʼʼ ಎಂದು ಹೇಳಿಕೊಂಡಿದ್ದರು.

ಕಳೆದ ವರ್ಷ ಅಲ್ಲು ಚಿತ್ರರಂಗದಲ್ಲಿ 20ವರ್ಷಗಳನ್ನು ಪೂರೈಸಿದರು. ಈ ಬಗ್ಗೆ ನಟ ಸಂತಸ ವ್ಯಕ್ತಪಡಿಸಿ “ಇಂದಿಗೆ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 20 ವರ್ಷಗಳು ಕಳೆದಿವೆ. ಈ ವರ್ಷಗಳಲ್ಲಿ ನನಗೆ ಭರಪೂರ ಆಶೀರ್ವಾದ ಮತ್ತು ಪ್ರೀತಿ ಸಿಕ್ಕಿದೆ. ನಮ್ಮ ಕ್ಷೇತ್ರದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಪ್ರೀತಿ, ಅಭಿಮಾನದಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಅದಕ್ಕೆ ಎಂದಿಗೂ ಋಣಿಯಾಗಿರುತ್ತೇನೆ” ಎಂದು ಹೇಳಿದ್ದರು.

ಇಂದೇ ಟೀಸರ್ ಬಿಡುಗಡೆ

ಈ ವರ್ಷದ ಬಹು ನಿರೀಕ್ಷಿತ ‘ಪುಷ್ಪ 2: ದಿ ರೂಲ್’ ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗಲಿದೆ. ಈಗಾಗಲೇ ದೇಶಾದ್ಯಂತ ಕುತೂಹಲ ಮೂಡಿಸಿರುವ ಈ ಸಿನಿಮಾಕ್ಕೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಟೀಸರ್‌ ಮೂಲಕವೇ ಈ ಚಿತ್ರ ಗಮನ ಸೆಳೆದಿದೆ.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಬಹು ನಿರೀಕ್ಷಿತ ʼಪುಷ್ಪ 2ʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಅಂದಹಾಗೆ ʼಪುಷ್ಪ 2: ದಿ ರೂಲ್‌ʼ ಚಿತ್ರ 2021ರಲ್ಲಿ ತೆರೆಕಂಡ ʼಪುಷ್ಪ: ದಿ ರೈಸ್‌ʼ ಸಿನಿಮಾದ ಎರಡನೇ ಭಾಗ. ಅದನ್ನೂ ಸುಕುಮಾರ್‌ ನಿರ್ದೇಶಿಸಿದ್ದರು. ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಬಂದಿದ್ದ ಅದು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. 370 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಇಲ್ಲೂ ಮುಂದುವರಿದಿದ್ದಾರೆ. ಚಿತ್ರದ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಏಪ್ರಿಲ್‌ 5ರಂದು ರಶ್ಮಿಕಾ ಮಂದಣ್ಣ ಹುಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್‌ ರಿಲೀಸ್‌ ಮಾಡಿತ್ತು. ಇದು ಕೂಡ ಗಮನ ಸೆಳೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version