Site icon Vistara News

Amala Paul: ಮದುವೆಯಾದ 8 ತಿಂಗಳಿಗೇ ಗಂಡು ಮಗುವಿಗೆ ಜನ್ಮ ನೀಡಿದ ಸುದೀಪ್‌ ಚಿತ್ರದ ನಾಯಕಿ

Amala Paul

Amala Paul

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ, ಬಹುಭಾಷಾ ಕಲಾವಿದೆ, ʼಹೆಬ್ಬುಲಿʼ ಚಿತ್ರದಲ್ಲಿ ಕಿಚ್ಚ ಸುದೀಪ್‌ ಜತೆ ಹೆಜ್ಜೆ ಹಾಕಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದ ಅಮಲಾ ಪೌಲ್‌ (Amala Paul) ಜೂನ್‌ 11ರಂದು ಗಂಡು ಮುವಿಗೆ ಜನ್ಮ ನೀಡಿದ್ದಾರೆ. ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಕಳೆದ ನವೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಮಲಾ ಪೌಲ್‌-ಜಗತ್‌ ದೇಸಾಯಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಈ ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. ಅಮಲಾ ಪೌಲ್‌ ಪುಟ್ಟ ಮಗುವನ್ನು ಎತ್ತಿಕೊಂಡು ಆಸ್ಪತ್ರಯಿಂದ ಮನೆಗೆ ಮರಳುತ್ತಿರುವ ವಿಡಿಯೊ ಪೋಸ್ಟ್‌ ಮಾಡಿದ್ದು, ಫ್ಯಾನ್ಸ್‌ ಶುಭಾಶಯ ತಿಳಿಸಿದ್ದಾರೆ. ಅಮಲಾ ಪೌಲ್‌ ಮತ್ತು ಜಗನ್‌ ದೇಸಾಯಿ ದಂಪತಿ ಜೂನ್‌ 11ರಂದು ಮಗು ಜನಿಸಿರುವುದಾಗಿ ಹೇಳಿದ್ದಾರೆ. ಜತೆಗೆ ಮಗುವಿಗೆ ಇಳಯ್‌ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಇಳಯ್‌ ಎಂದರೆ ʼʼಸಂತೋಷದ ನಗುವಿನೊಂದಿಗೆ ಬೆಳಗುವ ಉತ್ಸಾಹಭರಿತ ಆತ್ಮʼʼ, ʼʼಶ್ರೇಷ್ಠ” ಮತ್ತು “ದೇವರಂತಹ” ಎಂಬ ಅರ್ಥವಿದೆ.

ʼʼನಮ್ಮ ಮಗ ಇಳಯ್‌ ಜೂನ್‌ 11ರಂದು ಜನಿಸಿದʼʼ ಎಂಬ ಕ್ಯಾಪ್ಶನ್‌ ನೀಡಿ ದಂಪತಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಸೆಲೆಬ್ರಿಟಿಗಳು, ಅಭಿಮಾನಿಗಳು ಇವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಮಲಾ ಪೌಲ್‌ ಮತ್ತು ಉದ್ಯಮಿ ಜಗತ್ ದೇಸಾಯಿ 2023ರ ನವೆಂಬರ್ 5ರಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದರು. ಅದಾಗಿ ಎರಡನೇ ತಿಂಗಳಿಗೆ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಅಂದಹಾಗೆ ಇದು ಅಮಲಾ ಪೌಲ್‌ ಅವರಿಗೆ ಎರಡನೇ ವಿವಾಹ. ಇದಕ್ಕೂ ಮೊದಲು ನಿರ್ದೇಶಕ ಎ.ಎಲ್.ವಿಜಯ್ ಅವರೊಂದಿಗೆ ಅಮಲಾ ಪೌಲ್‌ ವಿವಾಹ 2014ರಲ್ಲಿ ಚೆನ್ನೈನಲ್ಲಿ ನೆರವೇರಿತ್ತು. ಆದರೆ ಈ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2017ರಲ್ಲಿ ಅಮಲಾ ಮತ್ತು ವಿಜಯ್ ವಿಚ್ಛೇದನ ಪಡೆದುಕೊಂಡಿದ್ದರು.

ಬಹುಭಾಷಾ ನಟಿ

ಮಲಯಾಳಂ ಮೂಲದ ಅಮಲಾ ಪೌಲ್‌ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಅಭಿನಯಿಸಿ ಬಹುಭಾಷಾ ನಟಿ ಎನಿಸಿಕೊಂಡೊದ್ದಾರೆ. ಅದರಲ್ಲಿಯೂ ಅವರು ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಟಾಪ್‌ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಸೂರ್ಯ, ಮಾಧವನ್‌, ಆರ್ಯ, ಧನುಷ್‌ ಮುಂತಾದ ಸೂಪರ್‌ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು.

ಅಮಲಾ ಅಭಿನಯಿಸಿದ ಮೊದಲ ಚಿತ್ರ ಮಲೆಯಾಳಂನ ʼನೀಲ ತಾಮರʼ. ಇದು 2009ರಲ್ಲಿ ತೆರೆಕಂಡಿತ್ತು. ಬಳಿಕ ಕಾಲಿವುಡ್‌ಗೆ ಕಾಲಿಟ್ಟ ಅವರು 2010ರಲ್ಲಿ ಮೂರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅದರಲ್ಲಿಯೂ ʼಮೈನಾʼ ಅವರಿಗೆ ಬಹು ಜನಪ್ರಿಯತೆ ತಂದುಕೊಟ್ಟಿತು. ಈ ಚಿತ್ರದಲ್ಲಿನ ನಟನೆಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. 2012ರಲ್ಲಿ ʼಲವ್‌ ಫೈಲೂರ್‌ʼ ಸಿನಿಮಾ ಮೂಲಕ ತೆಲುಗಿಗೆ ಕಾಲಿಟ್ಟರು. 2017ರಲ್ಲಿ ಕಿಚ್ಚ ಸುದೀಪ್‌ ಅಭಿನಯದ ʼಹೆಬ್ಬುಲಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪ್ರವೇಶಿಸಿದರು. ಕಳೆದ ವರ್ಷ ತೆರೆಕಂಡ ಹಿಂದಿಯ ʼಭೋಲಾʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Amala Paul: ಎರಡನೇ ಮದುವೆಯಾದ ‘ಹೆಬ್ಬುಲಿ’ ನಟಿ ಅಮಲಾ ಪೌಲ್!

ಇತ್ತೀಚೆಗೆ ತೆರೆಕಂಡ ಪ್ಯಾನ್‌ ಇಂಡಿಯಾ ಸಿನಿಮಾ ʼಆಡು ಜೀವಿತಂʼನಲ್ಲಿ ಅಮಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್‌ ಸುಕುಮಾರನ್‌ ನಾಯಕನಾಗಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದೆ.

Exit mobile version