Site icon Vistara News

Netaji Jayanti | ಸಮಾಧಿಯಿಂದ ಗುಮ್ನಾಮಿವರೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತಾದ ಸಿನಿಮಾಗಳಿವು

ಬೆಂಗಳೂರು: ಇಂದು ಸ್ವಾತಂತ್ರ್ಯ ವೀರ ಸುಭಾಷ್‌ ಚಂದ್ರ ಬೋಸ್‌ ಅವರ 126ನೇ ಜನ್ಮದಿನ (Netaji Jayanti). ನೇತಾಜಿ ಎಂದೇ ಪ್ರಖ್ಯಾತಿ ಪಡೆದಿದ್ದ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟ ಕೊಡುಗೆ ಅಪಾರ. ಅವರ ಕುರಿತು ಭಾರತೀಯ ಸಿನಿಮಾ ರಂಗ ಅಪಾರವಾದ ಗೌರವವನ್ನು ತೋರಿಸಿದೆ. ಅವರ ಬದುಕಿನ ಕುರಿತಾಗಿ ಹಲವಾರು ಸಿನಿಮಾಗಳು, ಸಾಕ್ಷ್ಯ ಚಿತ್ರಗಳು ನಿರ್ಮಾಣವಾಗಿ, ಜನಪ್ರಿಯತೆಯನ್ನು ಗಳಿಸಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.


ಸಮಾಧಿ (1950)


ಈ ಸಿನಿಮಾ ನೇರವಾಗಿ ನೇತಾಜಿ ಅವರ ಕಥೆಯನ್ನು ಹೇಳುವಂತದ್ದಲ್ಲ. ಆದರೆ ಇದರಲ್ಲಿ ಬೋಸ್‌ ಅವರ ʼಇಂಡಿಯನ್‌ ನ್ಯಾಷನಲ್‌ ಆರ್ಮಿʼಯ ಯೋಧನೊಬ್ಬನ ಕಥೆಯಿದೆ. ಯೋಧನೊಬ್ಬ ದೇಶಕ್ಕಾಗಿ ತನ್ನ ಪ್ರೀತಿಯನ್ನು ಹಾಗೂ ಸಹೋದರಿಯನ್ನು ತ್ಯಾಗ ಮಾಡುವ ಕಥೆಯಿದು. ರಮೇಶ್‌ ಸೈಗಲ್‌ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ಆದರ್ಶ ಮತ್ತು ಅವರು ರಾಜಕೀಯ ನಿಲುವುಗಳ ಬಗ್ಗೆ ತೋರಿಸಿಕೊಡಲಾಗಿದೆ.


ಸುಭಾಷ್‌ ಚಂದ್ರ (1966)


ಬಂಗಾಳಿ ಭಾಷೆಯ ಸಿನಿಮಾವಾಗಿರುವ ಇದನ್ನು ನಿರ್ದೇಶಕ ಪಿಯೂಷ್‌ ಬೋಸ್‌ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ಬಾಲ್ಯ, ಕಾಲೇಜು ದಿನಗಳು, ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆದ ಅನುಭವ ಸೇರಿ ಹಲವು ವಿಚಾರಗಳನ್ನು ತೋರಿಸಿಕೊಡಲಾಗಿದೆ.


ನೇತಾಜಿ ಸುಭಾಷ್‌ ಚಂದ್ರ ಬೋಸ್‌: ದಿ ಫರ್ಗಟನ್‌ ಹೀರೋ ( 2004):


ಈ ಸಿನಿಮಾದಲ್ಲಿ ಬೋಸ್‌ ಅವರು ಗೃಹ ಬಂಧನದಿಂದ ತಪ್ಪಿಸಿಕೊಳ್ಳುವುದು, ʼಇಂಡಿಯನ್‌ ನ್ಯಾಷನಲ್‌ ಆರ್ಮಿ(ಐಎನ್‌ಎ)ʼ ಸ್ಥಾಪಿಸುವುದನ್ನು ತೋರಿಸಲಾಗಿದೆ. ಹಾಗೆಯೇ ಅಂಬೇಡ್ಕರ್‌ ಅವರ ಆಜಾದ್‌ ಹಿಂದ್‌ ಫೌಜ್‌ ಸಂಘಟನೆಯು ಬ್ರಿಟಿಷ್‌ ಆಡಳಿತದಿಂದ ಭಾರತವನ್ನು ಸ್ವತಂತ್ರಗೊಳಿಸಲು ಹೇಗೆ ಕೆಲಸ ಮಾಡಿತು ಎನ್ನುವುದನ್ನು ತೋರಿಸಲಾಗಿದೆ. ಪ್ರಸಿದ್ಧ ನಿರ್ದೇಶಕ ಶ್ಯಾಮ್‌ ಬೆನೆಗಲ್‌ ನಿರ್ದೇಶನವಿರುವ ಈ ಸಿನಿಮಾದಲ್ಲಿ ಸಚಿನ್‌ ಖೆಡೆಕರ್‌ ಅವರು ನೇತಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಅಮಿ ಸುಭಾಷ್‌ ಬೊಲ್ಚಿ (2011):


ಇದೊಂದು ಬಂಗಾಳಿ ಭಾಷೆಯ ಸಿನಿಮಾವಾಗಿದೆ. ಇದರಲ್ಲಿ ಸಮಾಜದ ಸಮಸ್ಯೆಗಳನ್ನು ತೋರಿಸಲಾಗಿದೆ. ಹಾಗೆಯೇ ಅದೆಲ್ಲವನ್ನು ನಿರ್ಮೂಲನೆ ಮಾಡುವುದಕ್ಕೆ ಸುಭಾಷ್‌ ಚಂದ್ರ ಬೋಸ್‌ ಅವರು ಒಬ್ಬಂಟಿಯಾಗಿ ಹೋರಾಡುವುದನ್ನು ಕಥೆಯಾಗಿ ರೂಪಿಸಲಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಮಹೇಶ್‌ ಮಂಜ್ರೆಕರ್‌ ಅವರು ನಿರ್ದೇಶಿಸಿದ್ದಾರೆ.


ರಾಗ್‌ ದೇಶ್‌ (2017):


ಈ ಸಿನಿಮಾ ಬೋಸ್‌ ಅವರು ರಚಿಸಿದ ʼಇಂಡಿಯನ್‌ ನ್ಯಾಷನಲ್‌ ಆರ್ಮಿʼಯ ಕಥೆಯಾಗಿದೆ. ಬುರ್ಮಾದಲ್ಲಿನ ಇರ್ರಾವಡ್ಡಿ ದಡದಲ್ಲಿ ಐಎನ್‌ಎ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು ಇಲ್ಲಿ ತೋರಿಸಲಾಗಿದೆ. ತಿಗ್ಮಾಂಶು ಧುಲಿಯಾ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ಕೆಂಪು ಕೋಟೆ ವಿಚಾರಣೆಯಲ್ಲಿ ಬ್ರಿಟಿಷರು ಐಎನ್‌ಎ ವಿರುದ್ಧ ಆರೋಪಗಳನ್ನು ಹೊರಿಸಿದ್ದನ್ನೂ ತೋರಿಸಿಕೊಡಲಾಗಿದೆ.


ಬೋಸ್‌ ಡೆಡ್‌/ಅಲೈವ್‌ (2017):


ಇದು ಸಿನಿಮಾವಲ್ಲ, ಬದಲಾಗಿ ಧಾರಾವಾಹಿ. ಲೇಖಕ ಔಜ್‌ ಧರ್‌ ಅವರ 2012ರ ಪುಸ್ತಕವಾದ ʼಇಂಡಿಯಾಸ್‌ ಬಿಗ್ಗೆಸ್ಟ್‌ ಕವರ್‌-ಅಪ್‌ʼ ಆಧರಿಸಿ ಈ ಧಾರಾವಾಹಿ ಮಾಡಲಾಗಿದೆ. ಇದರಲ್ಲಿ ಬೋಸ್‌ ಅವರ ಸಾವಿನ ಸುತ್ತಲಿನ ಕಥೆಗಳನ್ನು ತೋರಿಸಲಾಗಿದೆ. ನಿರ್ದೇಶಕಿ ಏಕ್ತಾ ಕಪೂರ್‌ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟ ರಾಜ್‌ಕುಮಾರ್‌ ರಾವ್‌ ಅವರ ನೇತಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಗುಮ್ನಾಮಿ ( 2019):


ಗುಮ್ನಾಮಿ ಸಿನಿಮಾ 1999ರಿಂದ 2005ರವರೆಗೆ ನಡೆದ ಮುಖರ್ಜಿ ಸಮಿತಿ ವಿಚಾರಣೆಯ ಬಗೆಗಿರುವ ಸಿನಿಮಾವಾಗಿದೆ. ಈ ವಿಚಾರಣೆಯಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಸಾವಿನ ಬಗ್ಗೆ ಹಲವು ರೀತಿಯಲ್ಲಿ ಚರ್ಚೆಗಳು ನಡೆದಿದ್ದವು. ಇದರಲ್ಲಿ ನೇತಾಜಿ ಅವರು ಮೂರು ರೀತಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಚರ್ಚೆಯಾಗಿತ್ತು.


ದಿ ಫರ್ಗಟನ್‌ ಆರ್ಮಿ (2020):


ಈ ಡಾಕ್ಯುಮೆಂಟರಿ 1999ರಲ್ಲೇ ಮೊದಲನೇ ಬಾರಿಗೆ ಬಿಡುಗಡೆಯಾಗಿತ್ತು. ಕಬೀರ್ ಖಾನ್‌ ನಿರ್ದೇಶನವಿರುವ ಈ ಡಕ್ಯುಮೆಂಟರಿ 2020ರಲ್ಲಿ ಒಟಿಟಿಗಳಲ್ಲಿ ಮರು ಬಿಡುಗಡೆಯಾಗಿದೆ. ಇದರಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ʼಇಂಡಿಯನ್‌ ನ್ಯಾಷನಲ್‌ ಆರ್ಮಿʼಯ ಯೋಧರ ಬದುಕಿನ ಕಥೆಗಳಿವೆ. ಇದು ಆರು ಸಂಚಿಕೆಗಳಿರುವ ಡಾಕ್ಯುಮೆಂಟರಿಯಾಗಿದೆ.

Exit mobile version