Site icon Vistara News

Amitabh Bachchan: ಕಚೇರಿ ಬಾಡಿಗೆಗೆ ನೀಡಿದ ಬಿಗ್‌ ಬಿ; ತಿಂಗಳ ರೆಂಟ್‌ ಇಷ್ಟೊಂದಾ?

amithabh bachan

amithabh bachan

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ (Amitabh Bachchan) ದೇಶದ ಜನಪ್ರಿಯ ನಟರಲ್ಲಿ ಒಬ್ಬರು. ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರ ಸಾಲಿನಲ್ಲಿ ಇವರ ಹೆಸರು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಸಿನಿಮಾ, ಜಾಹೀರಾತು, ಶೋ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಸದಾ ಬ್ಯುಸಿ ಇರುತ್ತಾರೆ. ಇದರ ಹೊರತಾಗಿಯೂ ಅವರು ಹೂಡಿಕೆಯಲ್ಲಿಯೂ ತೊಡಗಿದ್ದಾರೆ. ಇದೀಗ ಮುಂಬೈಯ ಓಶಿವಾರ ಏರಿಯಾದಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಜಾಗವನ್ನು ಭಾರಿ ಮೊತ್ತಕ್ಕೆ ಬಾಡಿಗೆಗೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಭಾರೀ ಮೊತ್ತದ ಬಾಡಿಗೆ

10 ಸಾವಿರ ಚದರ ಅಡಿಯ ಸ್ಥಳವನ್ನು ಅಮಿತಾಭ್‌ ಬಚ್ಚನ್‌ ಸಂಗೀತ ಸಂಸ್ಥೆಯೊಂದಕ್ಕೆ ಬಾಡಿಗೆಗೆ ನೀಡಿದ್ದಾರೆ. ಬರೋಬ್ಬರಿ 1.03 ಕೋಟಿ ರೂ. ಅನ್ನು ಭದ್ರತಾ ಮೊತ್ತವನ್ನಾಗಿ ಪಡೆದುಕೊಂಡಿರುವ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆಯನ್ನು 17.50 ಲಕ್ಷ ರೂ. ನಿಗದಿ ಪಡಿಸಿದ್ದಾರೆ. ಅಂದರೆ ವರ್ಷಕ್ಕೆ 2.07 ಕೋಟಿ ರೂ. ಬಾಡಿಗೆ ಮೊತ್ತ ಸಿಗಲಿದೆ. ಅಮಿತಾಭ್‌ ಬಚ್ಚನ್‌ ಈಗ ಬಾಡಿಗೆಗೆ ನೀಡಿರುವ ಜಾಗವನ್ನು 2023ರ ಆಗಸ್ಟ್​ನಲ್ಲಿ ಖರೀದಿಸಿದ್ದರು. ಆಗ 7.18 ಕೋಟಿ ರೂ. ಮೊತ್ತವನ್ನು ಬಚ್ಚನ್ ಪಾವತಿಸಿದ್ದರು. ಸದ್ಯ ಮೂರು ವರ್ಷಕ್ಕೆ ಬಾಡಿಗೆ ಕರಾರು ಮಾಡಿಕೊಳ್ಳಲಾಗಿದೆ. ಒಪ್ಪಂದವನ್ನು ನೊಂದಣಿಯ ಶುಲ್ಕವಾಗಿ 2.88 ಲಕ್ಷ ರೂ. ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆಸ್ತಿಗೆ ಮೂರು ವರ್ಷಗಳ ಲಾಕ್-ಇನ್ ಅವಧಿ ಮತ್ತು 12 ಪಾರ್ಕಿಂಗ್ ಸ್ಥಳಗಳನ್ನು ನೀಡಲಾಗಿದೆ.

ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ

ಸದ್ಯ ಅಮಿತಾಭ್‌ ಬಚ್ಚನ್‌ ವಿವಿಧ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಜತೆಗೆ ನಟಿಸುತ್ತಿರುವ ವೈಜ್ಞಾನಿಕ, ಕಾಲ್ಪನಿಕ ಚಿತ್ರ ʼಕಲ್ಕಿ 2898 ಎಡಿʼ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ 2024ರಲ್ಲಿ ಬಿಡುಗಡೆಯಾಗಲಿದೆ. ʼಮಹಾನಟಿʼ ತೆಲುಗು ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಜನಪ್ರಿಯ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಹೇಳುತ್ತಿದ್ದಾರೆ. ʼಸಲಾರ್‌ʼ ಮೂಲಕ ಸತತ ಸೋಲಿನ ಸುಳಿಯಿಂದ ಎದ್ದು ಬಂದಿರುವ ಪ್ರಭಾಸ್‌ಗೆ ಈ ಚಿತ್ರವೂ ಯಶಸ್ಸು ತಂದು ಕೊಡಲಿದೆ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ. ಇದರ ಜತೆಗೆ ಬಿಗ್‌ ಬಿ ತಮಿಳು ಚಿತ್ರ ʼವೆಟ್ಟೈಯನ್‌ʼನಲ್ಲಿ ಬಹಳ ವರ್ಷಗಳ ಬಳಿಕ ರಜನಿಕಾಂತ್ ಅವರೊಂದಿಗೆ ನಟಿಸುತ್ತಿದ್ದಾರೆ. ಇವರಿಬ್ಬರು ಈ ಹಿಂದೆ 1990ರಲ್ಲಿ ದಶಕದಲ್ಲಿ ಮುಕುಲ್ ಆನಂದ್ ಅವರ ʼಹಮ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಕೂಡ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಜತೆಗೆ ‘ದಿ ಉಮೇಶ್ ಕ್ರೋನಿಕಲ್ಸ್’ ಸಿನಿಮಾದಲ್ಲಿಯೂ ಅಮಿತಾಭ್‌ ಬಚ್ಚನ್‌ ಬಣ್ಣ ಹಚ್ಚಿದ್ದಾರೆ. ಮಾತ್ರವಲ್ಲ ಜನಪ್ರಿಯ ಗೇಮ್ ಶೋ ʼಕೌನ್ ಬನೇಗಾ ಕರೋಡ್‌ಪತಿಯನ್ನು ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿ: Kaun Banega Crorepati 15: 7 ಕೋಟಿ ರೂ. ಗೆಲ್ಲಲಿದ್ದಾರಾ ಜಸ್‌ಕರಣ್‌ ಸಿಂಗ್? ಅಮಿತಾಭ್‌ ಬಚ್ಚನ್‌ ಸಸ್ಪೆನ್ಸ್‌

ಅಮಿತಾಭ್‌ ಬಚ್ಚನ್ ಇತ್ತೀಚೆಗೆ ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅವರೊಂದಿಗೆ ಕಾಣಿಸಿಕೊಂಡಿದ್ದ ʼಗಣಪತಿʼ ಹಿಂದಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಅವರ ಮುಂದಿನ ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version