Site icon Vistara News

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Amitabh Bachchan, AR Rahman honoured with Deenanath Mangeshkar award

ಮುಂಬೈ: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಏಪ್ರಿಲ್ 24ರಂದು ಮುಂಬೈನ ವಿಲೇ ಪಾರ್ಲೆ ಪ್ರದೇಶದಲ್ಲಿ ʻಲತಾ ದೀನನಾಥ್ ಮಂಗೇಶ್ಕರ್ʼ ಪುರಸ್ಕಾರ (Lata Deenanath Mangeshkar award) ನೀಡಿ ಗೌರವಿಸಲಾಯಿತು. ಜತೆಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು (Master Deenanath Mangeshkar Puraskar) ಪಡೆದರು. ಏಪ್ರಿಲ್ 24 ರಂದು ಮುಂಬೈನಲ್ಲಿ ಮಂಗೇಶ್ಕರ್ ಕುಟುಂಬದ ಸದಸ್ಯರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಮಿತಾಭ್‌ ಬಚ್ಚನ್ ಅವರಿಗೆ ಗಾಯಕಿ ಉಷಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಮಾಡಬೇಕಿದ್ದ ಆಶಾ ಭೋಂಸ್ಲೆ ಅವರು ಅಸ್ವಸ್ಥರಾಗಿರುವ ಕಾರಣ ಪ್ರಶಸ್ತಿಯನ್ನು ನೀಡಲಾಗಲಿಲ್ಲ.

ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸಿಕೊಂಡು ಬರುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಈ ಮುಂಚೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Amitabh Bachchan: 30 ಅಡಿ ಎತ್ತರದ ಬಂಡೆಯಿಂದ ಜಿಗಿದ ಅಮಿತಾಭ್‌: ನಿಜವಾದ ‘ಆ್ಯಕ್ಷನ್ ಹೀರೊʼ ನೀವೆ ಎಂದ ಫ್ಯಾನ್ಸ್‌!

ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಅಮಿತಾಭ್‌ ಬಚ್ಚನ್‌ ಮಾತನಾಡಿ, “ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಪ್ರಶಸ್ತಿಗೆ ನಾನು ಅರ್ಹನೆಂದು ಯಾವುತ್ತೂ ಅಂದುಕೊಂಡಿರಲಿಲ್ಲ. ಹೃದಯನಾಥ್ ಜಿ ಅವರು ನಾನು ಇಲ್ಲಿಗೆ ಬರಲು ಸಾಕಷ್ಟು ಪ್ರಯತ್ನಿಸಿದರು. ಹೃದಯನಾಥ್ ಜೀ, ನಾನು ಕೊನೆಯ ಬಾರಿಗೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಈ ಹಿಂದೆ ನೀವು ಕರೆದಾಗ ನಾನು ಅಸ್ವಸ್ಥನಾಗಿದ್ದೆʼʼಎಂದರು .

ಅಮಿತಾಭ್ ಬಚ್ಚನ್ ತಮ್ಮ ಭಾಷಣದಲ್ಲಿ, ಅವರ ತಂದೆ, ಪ್ರಸಿದ್ಧ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರು ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಪ್ರೀತಿಸುತ್ತಿದ್ದರು ಎಂದರು. ಮಾತ್ರವಲ್ಲ ಲತಾ ಮಂಗೇಶ್ಕರ್ ಧ್ವನಿ ಅತ್ಯಂತ ಮಾಧುರ್ಯ ಹಾಗೂ ಮಧುವಾಗಿತ್ತು ಎಂದು ಹೇಳಿದರು.

ಎಆರ್ ರೆಹಮಾನ್ ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರಶಸ್ತಿಯ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. “ಇಂದು ʻಲತಾ ದೀನನಾಥ್ ಮಂಗೇಶ್ಕರ್ʼ ಪ್ರಶಸ್ತಿಯನ್ನು ಪಡೆಯಲು ಗೌರವವಾಗಿದೆ. ನಾನು ಮಂಗೇಶ್ಕರ್ ಕುಟುಂಬದ ಪರಂಪರೆಯನ್ನು ಮತ್ತು ಅವರ ಕಲೆಯ ಸಮರ್ಪಣೆಯನ್ನು ಆರಾಧಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ನಟರಾದ ರಣದೀಪ್ ಹೂಡಾ, ಅಶೋಕ್ ಸರಾಫ್, ಹಿನ್ನೆಲೆ ಗಾಯಕ ರೂಪಕುಮಾರ್ ರಾಥೋಡ್ ಮತ್ತು ನಟಿ ಪದ್ಮಿನಿ ಕೊಲ್ಹಾಪುರೆ ಅವರನ್ನು ಸನ್ಮಾನಿಸಲಾಯಿತು.

ಬಹು ಅಂಗಾಂಗ ವೈಫಲ್ಯದಿಂದ 2022ರ ಫೆಬ್ರವರಿ 6ರಂದು ನಿಧನರಾದ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಮಂಗೇಶ್ಕರ್ ಕುಟುಂಬ ಮತ್ತು ಟ್ರಸ್ಟ್ ಈ ಪ್ರಶಸ್ತಿಯನ್ನು ನೀಡುತ್ತ ಬರುತ್ತಿದೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ ಹಾಗೂ ಖ್ಯಾತ ಲೇಖಕಿ ಮಂಜಿರಿ ಫಡ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದೆ ವೇಳೆ ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು.

Exit mobile version