Site icon Vistara News

ಹೆಲ್ಮೆಟ್​ ಇಲ್ಲದೆ ಬೈಕ್​​ನಲ್ಲಿ ಹೋಗಿ ಟ್ರೋಲ್ ಆದ ಅಮಿತಾಭ್​ ಬಚ್ಚನ್​; ಬ್ಲಾಗ್​​ನಲ್ಲಿ ಕೊಟ್ಟ ಸ್ಪಷ್ಟನೆ ಏನು?

Amitabh Bachchan clarifications About bike ride without helmet

#image_title

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್ (Amitabh Bachchan)​ ಅವರು ಸೋಮವಾರ ತಮ್ಮ ಅಭಿಮಾನಿಯೊಬ್ಬರ ಜತೆ ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತು ಹೋಗುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅವರು ಹೆಲ್ಮೆಟ್ ಇಲ್ಲದೆ ಬೈಕ್​ನಲ್ಲಿ ಹೋಗಿದ್ದು ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ. ತಿಳಿದವರೇ ಹೀಗೆ ಮಾಡಿದರೆ ಹೇಗೆ? ‘ಹೀಗೆ ಬೈಕ್​ನಲ್ಲಿ ಹೆಲ್ಮೆಟ್ ಇಲ್ಲದೆ, ಸೆಕ್ಯೂರಿಟಿ ಇಲ್ಲದೆ ಹೋಗಲು ಹೇಗೆ ಸಾಧ್ಯ?’ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದರು. ಅಷ್ಟೆ ಅಲ್ಲ, ಮುಂಬಯಿ ಪೊಲೀಸರು ಕೂಡ ‘ತಾವು ಕ್ರಮ ಕೈಗೊಳ್ಳುವುದಾಗಿ’ ತಿಳಿಸಿದ್ದರು. ಇಷ್ಟೆಲ್ಲ ಆದ ಮೇಲೆ ಈಗ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್​ನಲ್ಲಿ ಈ ಬಗ್ಗೆ ಬರೆದುಕೊಂಡು, ಸ್ಪಷ್ಟನೆ ನೀಡಿದ್ದಾರೆ.

‘ವಾಸ್ತವವಾಗಿ ಏನಾಯಿತು ಎಂದರೆ, ಅಂದು ಭಾನುವಾರ ಆಗಿತ್ತು. ಮುಂಬಯಿಯ ಒಂದು ರಸ್ತೆ ಮೇಲೆ ಚಿತ್ರೀಕರಣ ಮಾಡಬೇಕಿತ್ತು. ಬಲ್ಲಾರ್ಡ್ ಎಸ್ಟೇಟ್​ನ ಮಾರ್ಗದಲ್ಲಿ ಶೂಟಿಂಗ್ ಮಾಡಲು ಔಪಚಾರಿಕವಾಗಿ ಅನುಮತಿ ಪಡೆಯಲಾಗಿತ್ತು. ಸಾರ್ವಜನಿಕ ಸಂಚಾರ ಮತ್ತು ಟ್ರಾಫಿಕ್ ಕಡಿಮೆ ಇರುವ ಕಾರಣಕ್ಕೇ ಭಾನುವಾರ ಚಿತ್ರೀಕರಣಕ್ಕೆ ಅನುಮತಿ ಕೇಳಲಾಗಿತ್ತು. ನಾವು ಶೂಟಿಂಗ್ ಮಾಡಲು ನಿರ್ಧರಿಸಿದ ಪ್ರದೇಶದ ಒಂದು ಮಾರ್ಗವನ್ನು ಪೊಲೀಸರು ಬ್ಲಾಕ್ ಮಾಡಿದ್ದರು. ಆ ಲೇನ್​ 30-40 ಮೀಟರ್​ ಇತ್ತು. ನಾನು ಅದಾಗಲೇ ನನ್ನ ಸಿನಿಮಾ ಚಿತ್ರೀಕರಣದ ಉಡುಪು ಧರಿಸಿದ್ದೆ. ಆ ಪ್ರದೇಶದಲ್ಲೇ ಒಂದು ಕಡೆಯಿಂದ, ಇನ್ನೊಂದು ಕಡೆಗೆ ಹೋಗಲು ನಮ್ಮ ಸಿನಿಮಾ ತಂಡದ ಒಬ್ಬರು ಸಿಬ್ಬಂದಿಯಿಂದ ಬೈಕ್​​ನಲ್ಲಿ ಡ್ರಾಪ್​ ಪಡೆದೆ. ಸಮಯ ಉಳಿಸಲು ಹೀಗೆ ಮಾಡಿದೆ’ ಎಂದು ಹೇಳಿದ್ದಾರೆ.

’ಸಮಯದ ಅಭಾವ ಇದ್ದಾಗ ನಾನು ಹೀಗೆ ಬೈಕ್​ನಲ್ಲಿ ಹೋಗುತ್ತೇನೆ. ಹೆಚ್ಚಿಗೆ ಸಲ ಹೆಲ್ಮೆಟ್ ಧರಿಸುತ್ತೇನೆ, ಇತರ ಟ್ರಾಫಿಕ್ ನಿಯಮಗಳನ್ನೂ ಪಾಲಿಸುತ್ತೇನೆ. ನಾನೊಬ್ಬನೇ ಅಲ್ಲ, ಅಕ್ಷಯ್ ಕುಮಾರ್ ಕೂಡ ಹೀಗೆ ಬೈಕ್​ನಲ್ಲಿ ಚಿತ್ರೀಕರಣದ ಸ್ಥಳಕ್ಕೆ ಹೋಗುತ್ತಾರೆ. ಅವರೂ ಕೂಡ ಹೆಲ್ಮೆಟ್ ಧರಿಸಿ, ಎಲ್ಲ ನಿಯಮಗಳನ್ನೂ ಪಾಲನೆ ಮಾಡಿಯೇ ಸಂಚಾರ ಮಾಡುತ್ತಾರೆ. ಹೀಗೆ ನಾವು ಹೆಲ್ಮೆಟ್ ಧರಿಸಿ ಹೋದಾಗ ನಮ್ಮನ್ನು ಯಾರೂ ಗುರುತಿಸುವುದಿಲ್ಲ ಅಷ್ಟೇ’ ಎಂದಿದ್ದಾರೆ. ಹಾಗೇ, ನನ್ನ ಬಗ್ಗೆ ಕಾಳಜಿ ತೋರಿಸಿದ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.

Exit mobile version