ಬೆಂಗಳೂರು: ಅಮಿತಾಭ್ ಬಚ್ಚನ್ ಅವರು ತಮ್ಮ ಮುಂಬರುವ ಚಿತ್ರ, ʻಕಲ್ಕಿ 2898 ಎಡಿʼ (Kalki 2898 AD) ಬಗ್ಗೆ ಬಿಗ್ ಅಪ್ಡೇಟ್ ಹಂಚಿಕೊಂಡಿದ್ದಾರೆ. ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಮಿತಾಭ್ ತಮ್ಮ ಬ್ಲಾಗ್ನಲ್ಲಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ʻʻನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಮೇ 9ರಂದು ಸಿನಿಮಾ ಬಿಡುಗಡೆಯಾಗಲಿದೆʼʼ ಎಂದು ಬರೆದುಕೊಂಡಿದ್ದಾರೆ.
ನಿನ್ನೆ (ಮಾ.13) ರಾತ್ರಿ ತಡವಾಗಿ ಶೂಟಿಂಗ್ನಿಂದ ಬಂದೆ. ಕಲ್ಕಿ ಕೆಲಸಗಳು ಮುಗಿದಿವೆ. ಮೊದಲು ತಿಳಿಸಿದಂತೆ ಮೇ 9ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಭೂತ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಹಾಶಿವ ರಾತ್ರಿ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಭೈರವನಾಗಿ ಮಿಂಚಲಿದ್ದಾರೆ.
ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು
ಇದನ್ನೂ ಓದಿ: Kalki 2898 AD: ʼಕಲ್ಕಿ 2898 ಎಡಿʼ ಚಿತ್ರದ ಹೊಸ ಪೋಸ್ಟರ್ ಔಟ್; ಪ್ರಭಾಸ್ ಪಾತ್ರದ ಹೆಸರು ರಿವೀಲ್
ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿನ ತಾರಾಗಣ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜತೆಗೆ ಘಟಾನುಘಟಿಗಳಾದ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ದಿಶಾ ಪಠಾಣಿ ಕೂಡ ಅಭಿನಯಿಸುತ್ತಿದ್ದಾರೆ.
ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್ನ ʼಸಲಾರ್ʼ (270 ಕೋಟಿ ರೂ.), ʼಅನಿಮಲ್ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.
ಮೇ 9ರಂದು ಈ ಚಿತ್ರ ತೆರೆ ಕಾಣಲಿದೆ. ಇದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಡಿಜೋರ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಸಿನಿಮಾಕ್ಕಿದೆ.