Site icon Vistara News

ದಿವಾಳಿಯಾಗಿದ್ದಾಗ ಅಂಬಾನಿ ನೆರವು ನಿರಾಕರಿಸಿದ್ದ ಅಮಿತಾಭ್ ಬಚ್ಚನ್​​!

Amitabh bachchan Refused Monetary Help Offered By Dhirubai Ambani

ಮುಂಬಯಿ: ಬಾಲಿವುಡ್‌ನ ಮೇರುನಟ ಅಮಿತಾಭ್‌ ಬಚ್ಚನ್‌ ತಮ್ಮ ಬದುಕಿನಲ್ಲಿ ಜನಪ್ರಿಯತೆಯ ಶೃಂಗವನ್ನು ಕಂಡಂತೆಯೇ, ದಿವಾಳಿತನದ ಪಾತಾಳವನ್ನೂ ಕಂಡವರು. ತಮ್ಮ ಬದುಕಿನ ಸಂಕಷ್ಟದ ದಿನಗಳ ಬಗ್ಗೆ ಅವರು ಕೆಲವು ಬಾರಿ ಮನಬಿಚ್ಚಿ ಮಾತಾಡಿದ್ದಾರೆ. ಅಂಥದ್ದೇ ಒಂದು ಮಾತುಕತೆಯಲ್ಲಿ, ಆರ್ಥಿಕವಾಗಿ ದುರ್ದಿನಗಳನ್ನು ಎಣಿಸುತ್ತಿದ್ದಾಗ, ಧೀರೂಭಾಯ್‌ ಅಂಬಾನಿ ತಮಗೆ ನೆರವು ನೀಡಲು ಮುಂದಾದದ್ದನ್ನು ಮತ್ತು ತಾವದನ್ನು ನಯವಾಗಿ ನಿರಾಕರಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಐದು ವರ್ಷಗಳ ಹಿಂದಿನ, ಅಂದರೆ ೨೦೧೭ನಲ್ಲಿನ ಒಂದು ವಿಡಿಯೋದಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ೧೯೯೦ರ ದಶಕದ ಆರಂಭದಲ್ಲಿ ಅಮಿತಾಭ್‌ ಬಚ್ಚನ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎಬಿಸಿಎಲ್‌) ಮೂಲಕ ಉದ್ಯಮಿ ಎನಿಸಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ವಿಪರೀತ ನಷ್ಟ ಅನುಭವಿಸಿ ದಿವಾಳಿಯಾಗಿದ್ದರು. “ಕೋಟಿಗಟ್ಟಲೆ ರೂಪಾಯಿ ಸಾಲವನ್ನು ನಾನು ಹಿಂದಿರುಗಿಸಬೇಕಿತ್ತು. ಆದರೆ ಆದಾಯ ತರುವ ಎಲ್ಲಾ ಹಾದಿಗಳೂ ನನ್ನ ಪಾಲಿಗೆ ಮುಚ್ಚಿಹೋಗಿದ್ದವು. ಬ್ಯಾಂಕ್‌ನಲ್ಲಿ ನನ್ನ ಖಾಸಗಿ ಖಾತೆ ಶೂನ್ಯ ತೋರಿಸುತ್ತಿತ್ತು. ಈ ಬಗ್ಗೆ ತಿಳಿದಂಥ ಧೀರೂಭಾಯ್‌ ಅಂಬಾನಿ, ಆರ್ಥಿಕ ಸಹಾಯ ನೀಡಲು ಮುಂದಾಗಿದ್ದರು. ಅವರು ನನ್ನ ಸ್ನೇಹಿತನಾಗಿದ್ದ ಅವರ ಕಿರಿಯ ಮಗ ಅನಿಲ್‌ ಅಂಬಾನಿಯ ಬಳಿ, ʻಆತ ಕಷ್ಟದಲ್ಲಿದ್ದಾನೆ. ಸ್ವಲ್ಪ ಹಣದ ಸಹಾಯ ಮಾಡುʼ ಎಂದು ಹೇಳಿದ್ದರಂತೆ. ಅವರು ನೀಡಲು ಉದ್ದೇಶಿಸಿದ್ದ ಹಣದಿಂದ ನನ್ನೆಲ್ಲಾ ಕಷ್ಟಗಳೂ ಪರಿಹಾರವಾಗಿ ಬಿಡುತ್ತಿದ್ದವು. ಆದರೆ ಅವರ ಉದಾರತೆಯನ್ನು ಒಪ್ಪಿಕೊಳ್ಳಲು ಕಷ್ಟವಾಯಿತು” ಎಂದು ಭಾವುಕರಾಗಿ ನೆನಪಿಸಿಕೊಂಡಿರುವ ಬಚ್ಚನ್‌ ತಾವದನ್ನು ನಯವಾಗಿ ನಿರಾಕರಿಸಿದ್ದಾಗಿ ಹೇಳಿದ್ದಾರೆ.

ತಮ್ಮ ಎಬಿಸಿಎಲ್‌ ಪಾತಾಳ ಕಂಡ ದಿನಗಳನ್ನು ಮತ್ತು ಅದರಿಂದ ದುರ್ಭರವಾಗಿದ್ದ ತಮ್ಮ ಬದುಕನ್ನು ಅವರು ಈವರೆಗೆ ಕೆಲವು ಬಾರಿ ನೆನಪಿಸಿಕೊಂಡಿದ್ದಾರೆ. “ಈ ಸಂದರ್ಭದಲ್ಲಿ ಕುಳಿತು ಆಲೋಚಿಸಿದೆ ಈಗ ನಾನೇನು ಮಾಡಲಿ ಎಂದು. ʻನಾನೊಬ್ಬ ನಟ, ಮತ್ತೆ ನಟಿಸಬೇಕುʼ ಎಂದಿತು ನನ್ನ ಮನಸ್ಸು. ಹಾಗಾಗಿ ನಿರ್ದೇಶಕ ಯಶ್ ಛೋಪ್ರಾ ಅವರ ಬಳಿಗೆ ಹೋಗಿ, ನನಗೀಗ ಉದ್ಯೋಗವಿಲ್ಲ, ಕೆಲಸಕೊಡಿ ಎಂದು ಕೇಳಿದೆ” ಎಂದು ಅಮಿತಾಭ್‌ ಹೇಳಿದ್ದಾರೆ. ಆಗಲೇ ʻಮೊಹಬ್ಬತೇʼ ಚಿತ್ರದಲ್ಲಿ ನಾರಾಯಣ್‌ ಶಂಕರ್‌ ಪಾತ್ರ ಅವರ ಕೈಗೆ ಬಂತು. ಇದೇ ಸಮಯದಲ್ಲಿ ಕೌನ್‌ ಬನೇಗಾ ಕರೋಡ್‌ಪತಿ ಷೋದಲ್ಲಿ ನಿರೂಪಕರಾಗಿ ಮರುಹುಟ್ಟು ಪಡೆದುಕೊಂಡರು. ಅವರನ್ನು ಮುತ್ತಿಕೊಂಡಿದ್ದ ಕಷ್ಟಗಳೆಲ್ಲಾ ಒಂದೊಂದಾಗಿ ತೀರಿದ್ದವು.

ಇದನ್ನೂ ಓದಿ: Amitabh Bachchan | ತಮ್ಮ ಮುದ್ದು ನಾಯಿ ಮರಿ ನಿಧನಕ್ಕೆ ಭಾವುಕ ಪೋಸ್ಟ್‌ ಹಂಚಿಕೊಂಡ ಅಮಿತಾಭ್‌ ಬಚ್ಚನ್‌!

Exit mobile version