Site icon Vistara News

Amitabh Bachchan : ಹೆಲ್ಮೆಟ್‌ ಹಾಕದೇ ಬೈಕ್‌ನಲ್ಲಿ ಪ್ರಯಾಣಿಸಿದ ಬಚ್ಚನ್‌ಗೆ ನೆಟ್ಟಿಗರ ಕ್ಲಾಸ್‌

#image_title

ಮುಂಬೈ: ಬಾಲಿವುಡ್‌ನ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿ ಕೆಲ ತಿಂಗಳುಗಳ ಹಿಂದೆ ಬೈಕ್ ರೈಡ್‌ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಇದೀಗ ಅದೇ ರೀತಿಯಲ್ಲಿ ಬಾಲಿವುಡ್‌ನ ಬಿಗ್‌ ಬಿ ಎಂದೇ ಪ್ರಖ್ಯಾತರಾಗಿರುವ ಅಮಿತಾಭ್‌ ಬಚ್ಚನ್‌ (Amitabh Bachchan) ಅವರು ಬೈಕ್‌ ರೈಡ್‌ ಮಾಡಿದ್ದಾರೆ. ಆದರೆ ಅವರ ಈ ರೈಡ್‌ಗೆ ಧನಾತ್ಮಕ ಕಾಮೆಂಟ್‌ಗಳ ಜತೆ ಋಣಾತ್ಮಕ ಕಾಮೆಂಟ್‌ಗಳೂ ಹೆಚ್ಚಾಗಿ ಬಂದಿವೆ.

ಭಾನುವಾರದಂದು ಅಮಿತಾಭ್‌ ಅವರು ತಮ್ಮ ಚಿತ್ರೀಕರಣದ ಸೆಟ್‌ಗೆ ಹೋಗುವಾಗ ಹೆಚ್ಚು ಟ್ರಾಫಿಕ್‌ ಇತ್ತಂತೆ. ಹಾಗಾಗಿ ಅವರು ಅಪರಿಚಿತ ವ್ಯಕ್ತಿಯೊಬ್ಬರ ಬೈಕ್‌ನಲ್ಲಿ ಸೆಟ್‌ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಬೈಕ್‌ನ ಹಿಂಬದಿ ಸೀಟಿನಲ್ಲಿ ತಾವು ಕುಳಿತಿರುವ ಫೋಟೋ ಹಂಚಿಕೊಂಡಿರುವ ಅವರು, “ಬೈಕ್‌ ರೈಡ್‌ಗಾಗಿ ಥ್ಯಾಂಕ್ಯೂ ಬಡ್ಡಿ. ನೀವ್ಯಾರೆಂದು ತಿಳಿದಿಲ್ಲ. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಿಸಿದ್ದೀರಿ. ಬಗೆಹರಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಟ್ರಾಫಿಕ್‌ನಲ್ಲೂ ವೇಗವಾಗಿಯೇ ಕರೆತಂದಿದ್ದೀರಿ. ಹಳದಿ ಟೀ ಶರ್ಟ್‌ ಮತ್ತು ಶಾರ್ಟ್‌ ಮಾಲೀಕರಾಗಿರುವ ನಿಮಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Amitabh Bachchan: ಟ್ವಿಟರ್ ಬ್ಲೂ ಟಿಕ್‌ ಮಾಯವಾದ ಬಳಿಕ ತಮಾಷೆಯಾಗಿ ಟ್ವೀಟ್‌ ಹಂಚಿಕೊಂಡ ಅಮಿತಾಭ್‌ ಬಚ್ಚನ್‌
ಬಿಗ್‌ಬಿಯ ಈ ಫೋಟೋ ಮತ್ತು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗಿದೆ. ಬಾಲಿವುಡ್‌ನ ಗಣ್ಯರು ಕೂಡ ಪೋಸ್ಟ್‌ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ನೀವು ಯಾವಾಗಲೂ ಕೆಲಸದ ವಿಚಾರದಲ್ಲಿ ತುಂಬಾ ಸಮಯಪಾಲನೆ ಮಾಡುತ್ತೀರಿ ಎಂದು ಕೇಳಿದ್ದೆ. ಈಗ ಅದರ ಬಗ್ಗೆ ಗೊತ್ತಾಯಿತು”, “ನೀವು ಪ್ರಪಂಚದ ಅತ್ಯಂತ ಕೂಲ್‌ ಸೆಲೆಬ್ರಿಟಿ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಪೋಸ್ಟ್‌ಗೆ ಬಂದಿವೆ.


ಹಾಗೆಯೇ ಅಮಿತಾಭ್‌ ಮತ್ತು ಬೈಕ್‌ನ ಮಾಲೀಕ ಹೆಲ್ಮೆಟ್‌ ಹಾಕದೆಯೇ ಬೈಕ್‌ ರೈಡ್‌ ಮಾಡಿರುವ ಬಗ್ಗೆಯೂ ಸಾಕಷ್ಟು ಜನರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಎಲ್ಲಾ ಒಕೆ. ಆದರೆ ನೀವೊಬ್ಬ ಸೆಲೆಬ್ರಿಟಿಯಾಗಿದ್ದುಕೊಂಡು ಸುರಕ್ಷತೆಯನ್ನು ಮರೆಯಬಾರದಿತ್ತು”, “ಸಮಯಪಾಲನೆಗಿಂತ ಮುಖ್ಯ ಸುರಕ್ಷತೆ ಎನ್ನುವುದನ್ನು ಮರೆತಿರೇ?”, “ಹೆಲ್ಮೆಟ್‌ ಹಾಕಿಕೊಂಡಿದ್ದರೆ ಏನು ಸಮಸ್ಯೆಯಾಗುತ್ತಿತ್ತು?” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಪೋಸ್ಟ್‌ಗೆ ಬಂದಿವೆ.

Exit mobile version