ಚೆನ್ನೈ: ʻಅಮೃತವರ್ಷಿಣಿ’ ಸಿನಿಮಾ ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು (Sarath Babu) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 71 ವರ್ಷ ವಯಸ್ಸಿನ ಶರತ್ ಬಾಬು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶರತ್ ಬಾಬು ಅವರ ಆರೋಗ್ಯ ಹದಗೆಟ್ಟಿರುವ ಕುರಿತಾಗಿ ತೆಲುಗು ನಟಿ ಕಲ್ಯಾಣಿ ಪಾದಲಾ (ಕರಾಟೆ ಕಲ್ಯಾಣಿ) ಇನ್‌ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ʻಅಮೃತವರ್ಷಿಣಿʼ ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಜತೆ ನಟಿಸರುವ ಶರತ್ ಬಾಬು ಆರೋಗ್ಯ ಚಿಂತಾಜನಕವಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶರತ್ ಬಾಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಅಭಿಮಾನಿಗಳು ಕೂಡ ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Shyam Benegal: ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಎರಡೂ ಕಿಡ್ನಿ ಫೇಲ್, ಆರೋಗ್ಯ ಸ್ಥಿತಿ ಗಂಭೀರ
ಕಲ್ಯಾಣಿ ಪಾದಲಾ ಪೋಸ್ಟ್
1951 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಇವರು 1973 ಲ್ಲಿ ತೆರೆಕಂಡ `ರಾಮರಾಜ್ಯಂ’ ತೆಲುಗು ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಶರತ್ ಬಾಬು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಾಯಕನಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು. ನಾಯಕನಾಗಿ ಮತ್ತು ಪೋಷಕನಟನಾಗಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ಶರತ್ ಬಾಬು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ವಿವಾಹವಾಗಿದ್ದರು. ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ.