Site icon Vistara News

Ananth nag birthday | ಸ್ಯಾಂಡಲ್‌ವುಡ್‌ ಲೆಜೆಂಡ್‌, ಕನ್ನಡಿಗರ ಅಚ್ಚುಮೆಚ್ಚಿನ ನಟ ಅನಂತ್‌ ನಾಗ್‌ @75..!

Ananth Nag praises Modi

ಅನಂತ್‌ ನಾಗ್‌ ಹೆಸರು ಕೇಳಿದರೆ ಸಾಕು ಕನ್ನಡಿಗರ ಎದೆಯಲ್ಲಿ ಪುಳಕ. ಏಕೆಂದರೆ ನಟ ಅನಂತ್‌ ನಾಗ್‌ ಅಭಿನಯ ಅಂತಹದ್ದು, ಇಂದು ಅವರ ಹುಟ್ಟುಹಬ್ಬ. ಸ್ಯಾಂಡಲ್‌ವುಡ್‌ನ ಲೆಜೆಂಡ್‌ ಅಂತಾ ಕರೆಸಿಕೊಳ್ಳುವ ಅನಂತ್‌ ನಾಗ್‌ (Ananth nag birthday) ಮಾಡದಿರುವ ಪಾತ್ರವಿಲ್ಲ. ಗಂಭೀರ ಪಾತ್ರವೇ ಆಗಲಿ ಅಥವಾ ಕಾಮಿಡಿ ಜಾನರ್‌ ಆಗಿರಲಿ ಅನಂತ್‌ ನಾಗ್‌ ಸಲೀಸಾಗಿ ಮಾಡಿಬಿಡುತ್ತಾರೆ. ಆ್ಯಕ್ಷನ್‌ ಪ್ರಧಾನ ಸಿನಿಮಾಗಳಲ್ಲೂ ಅನಂತ್‌ ನಾಗ್‌ ಮಿಂಚಿದ್ದುಂಟು. ಇಂತಹ ಮಹಾನ್‌ ನಟನ ಜನ್ಮದಿನದಂದು ಗಣ್ಯರು ಶುಭಹಾರೈಸಿದ್ದಾರೆ.

ಈವರೆಗೂ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಂತ್‌ ನಾಗ್‌, ಇದೀಗ +300 ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್‌ ನಾಗ್‌ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಗೆದ್ದಾರೆ. ಅದರಲ್ಲೂ ಕೆಜಿಎಫ್‌ ಸಿನಿಮಾದಲ್ಲಿ ಅವರು ಮಾಡಿದ್ದ ನಟನೆಯನ್ನ ಎಂದಿಗೂ ಮರೆಯಲು ಆಗುವುದಿಲ್ಲ.

ಡೈಲಾಗ್‌ ಕಿಂಗ್..!
ಒಂದೊಂದು ಪೇಜ್‌ ಡೈಲಾಗ್‌ ಇದ್ದರೂ ಸರಳವಾಗಿ, ಸಲೀಸಾಗಿ ಹೇಳಿಬಿಡುತ್ತಿದ್ದರು ಅನಂತ್‌ ನಾಗ್.‌ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‘ ಇದಕ್ಕೊಂದು ಉದಾಹರಣೆ. ಅದರಲ್ಲೂ 80, 90ರ ದಶಕದಲ್ಲಿ ಅನಂತ್‌ ನಾಗ್‌ ಅವರ ಜೊತೆಗೆ ಸಿನಿಮಾ ಮಾಡಲು ನಿರ್ದೇಶಕರು ಮುಗಿಬೀಳುತ್ತಿದ್ದರು. ಪೋಷಕ ಪಾತ್ರವೇ ಇರಲಿ, ನಾಯಕನ ಪಾತ್ರವೇ ಆಗಿರಲಿ ಅನಂತ್‌ ನಾಗ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಇನ್ನು ಯಾವುದೇ ಸಿನಿಮಾ ಬಂದರೂ ಕುಟುಂಬ ಸಮೇತ ಕೂತು ನೋಡಲು ಮುಜುಗರ ಇರುತ್ತಿರಲಿಲ್ಲ. ಹೀಗಾಗಿ ಅನಂತ್‌ ನಾಗ್‌ ಅವರ ಸಿನಿಮಾಗಳು ಕನ್ನಡ ನಾಡಿನ ಮನೆಮಾತಾಗಿದ್ದವು.

ಸಾಲು ಸಾಲು ಹಿಟ್..!
ನಟ ಅನಂತ್‌ ನಾಗ್‌ 5 ದಶಕ ಅಂದರೆ ಬರೊಬ್ಬರಿ ಅರ್ಧ ಶತಮಾನಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯಲ್ಲಿ ಸಾಲುಸಾಲು ಹಿಟ್‌ ಸಿನಿಮಾ ನೀಡಿದ್ದ ಅನಂತ್‌ ನಾಗ್‌ ಯಾವುದೇ ಪಾತ್ರವಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಗೌರಿ ಗಣೇಶ, ಗಣೇಶನ ಮದುವೆ, ಯಾರಿಗೂ ಹೇಳಬೇಡಿ, ಮನೇಲಿ ಇಲಿ ಬೀದಿಲಿ ಹುಲಿ, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ ಹೀಗೆ ನಟ ಅನಂತ್‌ ನಾಗ್‌ ಅಭಿನಯಿಸಿರುವ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು.

ಅನಂತ್‌ ನಾಗ್‌ ಅವರ ಸಹಜ ಅಭಿನಯವನ್ನ ಇಷ್ಟಪಡದ ಪ್ರೇಕ್ಷಕನೇ ಇಲ್ಲ. ಅದರಲ್ಲೂ ಬೇರೆ ಬೇರೆ ಭಾಷೆಯಲ್ಲೂ ಅಭಿಮಾನಿಗಳ ಮನಗೆದ್ದವರು ನಟ ಅನಂತ್‌ ನಾಗ್‌. ಇನ್ನು 75ನೇ ವಸಂತಕ್ಕೆ ಕಾಲಿಟ್ಟಿರುವ ಅನಂತ್‌ ನಾಗ್‌ ಅವರು ಕುಟುಂಬ ಸದಸ್ಯರ ಜೊತೆಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗಣ್ಯರು ನಟ ಅನಂತ್‌ ನಾಗ್‌ ಅವರಿಗೆ ಶುಭ ಕೋರಿದ್ದು, ಇನ್ನೂ ಹಲವು ದಶಕಗಳ ಕಾಲ ಚಂದನವನಕ್ಕೆ ಅನಂತ್‌ ನಾಗ್‌ ಸೇವೆ ಸಲ್ಲಿಸಲಿ ಎಂಬುದೇ ಕೋಟಿ ಕೋಟಿ ಕನ್ನಡಿಗರ ಆಶಯ.

ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್‌ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ

Exit mobile version