Site icon Vistara News

Animal Movie: ಹಿಂಸಾತ್ಮಕ ʼಅನಿಮಲ್‌ʼ ಚಿತ್ರ ಸಂಸ್ಕೃತಿಯನ್ನು ಮರುವ್ಯಾಖ್ಯಾನಿಸಿದೆ ಎಂದ ಖ್ಯಾತ ನಿರ್ದೇಶಕ!

animal

animal

ಮುಂಬೈ: ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ʼಅನಿಮಲ್‌ʼ ಚಿತ್ರ (Animal Movie) ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದಲ್ಲಿ ಈ ಚಿತ್ರ ಈಗಾಗಲೇ 400 ಕೋಟಿ ರೂ. ಗಡಿ ದಾಟಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಚಿತ್ರ ರಿಲೀಸ್‌ ಆಗಿ 10 ದಿನ ಕಳೆದಿದ್ದರೂ ನಾಗಾಲೋಟ ಸ್ವಲ್ಪವೂ ಕಡಿಮೆಯಾಗಿಲ್ಲ. ಚಿತ್ರದಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎನ್ನುವ ಮಾತು ಗಳಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದು ಗಮನಾರ್ಹ. ಇದೀಗ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ (Ram Gopal Varma) ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ʼಅನಿಮಲ್‌ʼ ಸಿನಿಮಾವನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ರಾಮ್‌ ಗೋಪಾಲ್‌ ವರ್ಮ ಹೇಳಿದ್ದೇನು?

ರಾಮ್‌ ಗೋಪಾಲ್‌ ವರ್ಮ ತಮ್ಮ ಪೋಸ್ಟ್‌ನಲ್ಲಿ 5 ಅಂಶಗಳನ್ನು ಉಲ್ಲೇಖಿಸಿದ್ದಾರೆ. “1. ಹಿರಿಯಲು ಯೋಚಿಸಿದಂತೆ ಈಗಿನ ಭಾರತೀಯರಿಲ್ಲ. 2. ಚಲನಚಿತ್ರಗಳು ಒಂದು ಕಲಾ ಪ್ರಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎನ್ನುವುದಾದರೆ ಅನಿಮಲ್‌ ಚಿತ್ರ ಸಂಸ್ಕೃತಿಯನ್ನು ಮರುವ್ಯಾಖ್ಯಾನಿಸಿದೆ. ಈ ಹಿಂದೆ ಸಿನಿಮಾವನ್ನು ಕಲೆ ಎಂದು ಕರೆಯಲಾಗುತ್ತಿತ್ತು. ಅದನ್ನು ಈ ಚಿತ್ರ ನಾಶಪಡಿಸಿದೆ. 3. ಚಿತ್ರ ನೋಡಿದ ಪ್ರತಿಯೊಬ್ಬರೂ ಈಗ ತಮ್ಮಲ್ಲಿ ಯಾವ ರೀತಿಯ ಪ್ರಾಣಿಯ ಸ್ವಭಾವ ಅಡಗಿದೆ ಎನ್ನುವುದನ್ನು ಬಹಿರಂಗಪಡಿಸತೊಡಗಿದ್ದಾರೆ. 4. ಎಲ್ಲ ಭಾರತೀಯರು ಈಗ ನಿರ್ದೇಶಕರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎನ್ನುವುದನ್ನು ಈ ಚಿತ್ರ ಸಾಬೀತುಪಡಿಸಿದೆ. 5. ಎಲ್ಲ ಭಾರತೀಯರು ಈಗ ಪ್ರಬುದ್ಧರಾಗಿದ್ದಾರೆ ಎಂದು ರಾಮ್‌ ಗೋಪಾಲ್‌ ವರ್ಮ ಸೂಚ್ಯವಾಗಿ ಬರೆದಿದ್ದಾರೆ.

ಈ ಹಿಂದೆ ಚಿತ್ರದ ಬಗ್ಗೆ ಅದ್ಭುತ ವಿಮರ್ಶೆ ನೀಡಿದ್ದ ರಾಮ್‌ ಗೋಪಾಲ್‌ ವರ್ಮ ಇದೀಗ ಚಿತ್ರದ ಬಗ್ಗೆ ತಮ್ಮ ಆಲೋಚನೆಗಳ ಬಗ್ಗೆ ಇನ್ನಷ್ಟು ವಿವರಿಸಿದ್ದಾರೆ. ಸದ್ಯ ಈ ಪೋಸ್ಟ್‌ ಚಿತ್ರ ಪ್ರೇಮಿಗಳ ಗಮನ ಸೆಳೆದಿದೆ.

ತಂದೆ-ಮಗನ ಸಂಕೀರ್ಣ ಸಂಬಂಧದ ಕಥೆ ಹೇಳುವ ʼಅನಿಮಲ್‌ʼ ಚಿತ್ರವನ್ನು ಸಂದೀಪ್‌ ರೆಟ್ಟಿ ವಂಗಾ ನಿರ್ದೇಶಿಸಿದ್ದಾರೆ. ಹಿಂದಿ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ಈ ಚಿತ್ರ ತೆರೆಕಂಡಿದೆ. ಅನಿಕ್‌ ಕಪೂರ್‌, ಬಾಬ್ಬಿ ಡಿಯೋಲ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಸುಮಾರು 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಸಾಕಷ್ಟು ಹಿಂಸಾತ್ಮಕ ದೃಶ್ಯಗಳಿಂದಾಗಿ ʼಎʼ ಸರ್ಟಿಫಿಕೇಟ್ ಪಡೆದುಕೊಂಡಿದೆ. ಜತೆಗೆ ಬಹಳಷ್ಟು ಬೋಲ್ಡ್‌ ದೃಶ್ಯಗಳಿವೆ.

ಇದನ್ನೂ ಓದಿ: Animal Movie: ನಟ ರಣಬೀರ್‌ ಜತೆ ಲಿಪ್‌ಲಾಕ್‌ ಮಾಡಿದ ರಶ್ಮಿಕಾ; ಕಿಚ್ಚು ಹಚ್ಚಿದ ಅನಿಮಲ್‌ ಚಿತ್ರದ ಪೋಸ್ಟರ್‌

‘ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಸಿತ್ತು. 

Exit mobile version