Site icon Vistara News

Animal Movie: ಅನಿಮಲ್‌: ಇದು ಅತಿ ಹೆಚ್ಚು ಗಳಿಕೆ ಮಾಡಿದ ʼಎʼ ಸರ್ಟಿಫಿಕೆಟ್‌ ಸಿನಿಮಾ!

animal

animal

ಮುಂಬೈ: ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ʼಅನಿಮಲ್‌ʼ (Animal Movie) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ (Box office) ಮ್ಯಾಜಿಕ್‌ ಮುಂದುವರಿಸಿದೆ. ಕೆಲವೊಂದು ನೆಗೆಟಿವ್‌ ವಿಮರ್ಶೆಗಳ ಮಧ್ಯೆಯೂ ಈ ಚಿತ್ರ ಗಲ್ಲಾ ಪಟ್ಟಿಗೆಯಲ್ಲಿ 400 ಕೋಟಿ ರೂ.ಗಳ ಗಡಿ ದಾಟಿ ಪಾರಮ್ಯ ಮೆರೆದಿದೆ. ಚಿತ್ರ ಬಿಡುಗಡೆಯಾಗಿ 10 ದಿನಗಳಾಗಿದ್ದು, ಇನ್ನೂ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ.

10ನೇ ದಿನದ ಗಳಿಕೆ ಎಷ್ಟು?

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರ 10ನೇ ದಿನ ಎಲ್ಲ ಭಾಷೆಗಳಲ್ಲಿ ಸೇರಿ 30 ಕೋಟಿ ರೂ.ಗಿಂತ ಅಧಿಕ ಹಣ ಗಳಿಸಿದೆ. ಆ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ. ಬೆಂಚ್‌ ಮಾರ್ಕ್‌ ಅನ್ನು ಸುಲಭವಾಗಿ ದಾಟಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಚಿತ್ರದ ಒಟ್ಟು ಗಳಿಕೆ 432.27 ಕೋಟಿ ರೂ. ಆಗಿದೆ.

ಬಾಲಿವುಡ್‌ ಟ್ರೇಡ್‌ ಅನಾಲಿಸ್ಟ್‌ ತರಣ್‌ ಆದರ್ಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ʼಅನಿಮಲ್‌ʼ ಸಿನಿಮಾದ ಒಂದು ವಾರದ ಕಲೆಕ್ಷನ್‌ ಅನ್ನು ಬಹಿರಂಗಪಡಿಸಿದ್ದಾರೆ. ʼಒಂದು ವಾರದಲ್ಲಿ ಚಿತ್ರದ ಹಿಂದಿ ವರ್ಷನ್‌ 300.81 ಕೋಟಿ ರೂ. ಗಳಿಸಿದರೆ ದಕ್ಷಿಣ ಭಾರತದ ಭಾಷೆ (ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ)ಗಳ ಕೊಡುಗೆ 37.82 ಕೋಟಿ ರೂ. ಒಟ್ಟು ಕಲೆಕ್ಷನ್‌ 337.82 ಕೋಟಿ ರೂ. ಎಂದು ತಿಳಿಸಿದ್ದಾರೆ. ಇದು ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ʼಎʼ ಸರ್ಟಿಫಿಕೆಟ್‌ ಸಿನಿಮಾ ಎಂದು ಅವರು ತಿಳಿಸಿದ್ದಾರೆ. ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. 

ರಣಬೀರ್‌ ಕಪೂರ್‌ ವೃತ್ತಿ ಜೀವನದ ಅತಿ ದೊಡ್ಡ ಚಿತ್ರ

ʼಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಹಿಂದೆ ʼಸಂಜುʼ ರಣಬೀರ್‌ ಕಪೂರ್‌ ನಟನೆಯ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರವಾಗಿತ್ತು. ಕೇವಲ 8 ದಿನಗಳಲ್ಲಿಯೇ ಇದನ್ನು ʼಅನಿಮಲ್‌ʼ ಹಿಂದಿಕ್ಕಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು. 

ಇದನ್ನೂ ಓದಿ: Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

 ‘ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಸಿತ್ತು. ಇತ್ತ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆ ಇದೆ. ಅವರ ಈ ಹಿಂದಿನ ಎರಡು ಬಾಲಿವುಡ್‌ ಚಿತ್ರಗಳು ಹೇಳುವಷ್ಟು ಕಲೆಕ್ಷನ್‌ ಮಾಡಿರಲಿಲ್ಲ. ʼಮಿಷನ್‌ ಮಜ್ನುʼ ಒಟಿಟಿ ಮೂಲಕ ತೆರೆ ಕಂಡಿದ್ದರೆ, ʼಗುಡ್‌ಬೈʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿರಲಿಲ್ಲ. ಇದೀಗ ಮೂರನೇ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡುವ ಮೂಲಕ ದಕ್ಷಿಣ ಭಾರತದಂತೆ ಬಾಲಿವುಡ್‌ ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version