Site icon Vistara News

Animal: ಉತ್ತರ ಅಮೆರಿಕಾದಲ್ಲಿ ದಾಖಲೆ ನಿರ್ಮಿಸಿದ ರಶ್ಮಿಕಾ ಮಂದಣ್ಣ ಚಿತ್ರ

animal new

animal new

ಮುಂಬೈ: ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ʼಅನಿಮಲ್‌ʼ (Animal) ವಿಶ್ವಾದ್ಯಂತ ಬಿಡುಗಡೆಯಾಗಿದೆ. ಮೊದಲ ಬಾರಿ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ (Ranbir Kapoor-Rashmika Mandanna) ತೆರೆ ಹಂಚಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಇದೀಗ ಉತ್ತರ ಅಮೆರಿಕಾದಲ್ಲಿ ದಾಖಲೆ ನಿರ್ಮಿಸಿದೆ. ಅಲ್ಲಿ 1 ಮಿಲಿಯನ್‌ ಡಾಲರ್‌ (8,33,21,000 ರೂ.) ಕಲೆಕ್ಷನ್‌ ದಾಟಿದ ಮೊದಲ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಅನಿಮಲ್‌ ಪಾತ್ರವಾಗಿದೆ.

‘ಅನಿಮಲ್’ ಚಿತ್ರದ ಸಾಮಾಜಿಕ ಜಾಲತಾಣ ಎಕ್ಸ್ ಹ್ಯಾಂಡಲ್ ಇಂದು (ಡಿಸೆಂಬರ್ 1) ಈ ಸುದ್ದಿಯನ್ನು ಹಂಚಿಕೊಂಡಿದೆ. ʼಇತಿಹಾಸವನ್ನು ನಿರ್ಮಿಸಲಾಗಿದೆ! ‘ಅನಿಮಲ್’ ಉತ್ತರ ಅಮೆರಿಕಾದಲ್ಲಿ 1 ಮಿಲಿಯನ್ ಡಾಲರ್‌ ದಾಟಿದೆ. ಈ ಸಾಧನೆ ಮಾಡಿದ ಮೊದಲ ಹಿಂದಿ ಚಿತ್ರ ಇದು. ಇನ್ನೂ ಅನೇಕ ದಾಖಲೆಗಳನ್ನು ಮುರಿಯಲಿದೆʼ ಎಂದು ಎಕ್ಸ್‌ನಲ್ಲಿ ಬರೆಯಲಾಗಿದೆ.

ತಂದೆ-ಮಗನ ಕಥೆ

ಚಿತ್ರದ ಕಥೆಯನ್ನು ತಂದೆ ಮತ್ತು ಮಗನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿದೆ. ಅನಿಲ್‌ ಕಪೂರ್‌ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್‌ ಅರ್ಜುನ್ ಎನ್ನುವ ಪಾತ್ರ ನಿರ್ವಹಿಸಿದ್ದು, ತನ್ನ ಗುರಿಗಳನ್ನು ಸಾಧಿಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧನಿರುವ ವ್ಯಕ್ತಿ ಎಂದು ಚಿತ್ರದಲ್ಲಿ ವಿವರಿಸಲಾಗಿದೆ. ಜತೆಗೆ ತಂದೆ ಮತ್ತು ಮಗನ ನಡುವಿನ ಪ್ರಕ್ಷುಬ್ಧ ಸಂಬಂಧವನ್ನು ಇದು ತೆರೆದಿಡುತ್ತದೆ. ಚಿತ್ರದಲ್ಲಿ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ 3 ಗಂಟೆಗಿಂತ ದೀರ್ಘವಾಗಿದ್ದು, ಈ ಬಗ್ಗೆ ಕೆಲವು ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದು ಬಿಟ್ಟರೆ ಬೇರೆಲ್ಲ ವಿಚಾರವನ್ನು ಶ್ಲಾಘಿಸಿದ್ದಾರೆ. ಅದರಲ್ಲೂ ರಣಬೀರ್‌ ಕಪೂರ್‌ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರು ಸಂಕೀರ್ಣ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದು ಹಿಂದಿಯ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ತೆರೆಕಂಡಿದೆ.

ಇದನ್ನೂ ಓದಿ: Animal Trailer: ರಕ್ತಸಿಕ್ತ ಅವತಾರದಲ್ಲಿ ರಣಬೀರ್; `ಅನಿಮಲ್‌’ ಟ್ರೈಲರ್‌ ಔಟ್‌!

ಈ ಹಿಂದೆ ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರ. ಸೆಟ್ಟೇರಿದಾಗಿನಿಂದಲೂ ʼಅನಿಮಲ್‌ʼ ಒಂದಲ್ಲ ಕಾರಣಕ್ಕೆ ಸದ್ದು ಮಾಡುತ್ತಿದೆ. ಚಿತ್ರತಂಡ ಬಿಡುಗಡೆ ಮಾಡಿದ್ದ ʼಹುವಾ ಮೈನ್‌ʼ ಹಾಡಿನ ರಶ್ಮಿಕಾ-ರಣಬೀರ್ ಲಿಪ್‌ಲಾಕ್‌ ದೃಶ್ಯಗಳು ಕಿಚ್ಚು ಹಚ್ಚಿದ್ದವು. ಅಲ್ಲದೆ ರಕ್ತಸಿಕ್ತ ಸೀನ್‌ಗಳ ಟ್ರೈಲರ್‌ ಕೂಡ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಸಿನಿಮಾದ ಪ್ರಿ ಬುಕ್ಕಿಂಗ್ ದಾಖಲೆಯ ಕಲೆಕ್ಷನ್‌ ಮಾಡಿತ್ತು. ಪ್ರಿ ಬುಕ್ಕಿಂಗ್‌ ಬಗ್ಗೆ ಚಿತ್ರತಂಡ ಘೋಷಿಸಿದ 24 ಗಂಟೆಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ 3.4 ಕೋಟಿ ರೂ. ಮೌಲ್ಯದ ಟಿಕೆಟ್‌ ಮಾರಾಟವಾಗಿತ್ತು. ಇದೀಗ ಚಿತ್ರ ಬಿಡುಗಡೆಯಾಗಿದ್ದು ಹಲವು ದಾಖಲೆಗಳನ್ನು ಮುರಿಯಲಿದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version