ಬೆಂಗಳೂರು: ತೆಲುಗಿನ ಮಾಸ್ ಮಹಾರಾಜ ರವಿತೇಜ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ʻಟೈಗರ್ ನಾಗೇಶ್ವರ್ ರಾವ್ʼ ಅಂಗಳಕ್ಕೆ ಬಾಲಿವುಡ್ ದಿಗ್ಗಜ ಅನುಪಮ್ ಖೇರ್ (Anupam Kher) ಎಂಟ್ರಿಯಾಗಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಅನುಪಮ್ ಖೇರ್ ಅವರ ಪಾತ್ರ ಹಾಗೂ ಲುಕ್ ಪರಿಚಯಿಸಿದೆ. ಗುಪ್ತಚರ ಇಲಾಖೆಯ ಅಧಿಕಾರಿ ರಾಘವೇಂದ್ರ ರಜಪೂತ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದು, ಇದೇ 17ರಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.
70ರ ಕಾಲಘಟ್ಟದ ಹೈದ್ರಾಬಾದ್ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ (R. Madhi) ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ.
ಇದನ್ನೂ ಓದಿ: Ravi Teja: ’ಟೈಗರ್ ನಾಗೇಶ್ವರ್ ರಾವ್’ ಪರಿಚಯಿಸಿದ ಶಿವಣ್ಣ ; ರಾಜಮಂಡ್ರಿಯ ಹ್ಯಾವ್ಲಾಕ್ ಸೇತುವೆ ಮೇಲೆ ಫಸ್ಟ್ ಲುಕ್ ಲಾಂಚ್
ಅನುಪಮ್ ಖೇರ್ ಶೀಘ್ರದಲ್ಲೇ ಕಂಗನಾ ರಣಾವತ್ ನಿದೇಶನದ ಏಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ನವೆಂಬರ್ 24ರಂದು ಎಮರ್ಜೆನ್ಸಿ ಸಿನಿಮಾ ತೆರೆ ಕಾಣಲಿದೆ.
ಅನುಪಮ್ ಖೇರ್ (Anupam Kher) ತಮ್ಮ 538ನೇ ಚಿತ್ರವನ್ನು ಘೋಷಿಸಿದ್ದಾರೆ. ಜುಲೈ 8ರಂದು ಅನುಪಮ್ ಖೇರ್ ಇನ್ಸ್ಟಾಗ್ರಾಮ್ ಮೂಲಕ ರವೀಂದ್ರನಾಥ ಟ್ಯಾಗೋರ್ ಪಾತ್ರವನ್ನು ಮಾಡುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಚಿತ್ರದ ಹೆಸರನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.