Site icon Vistara News

Anupam Kher:  ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದಕ್ಕೆ ಅನುಪಮ್‌ ಖೇರ್‌ ಪ್ರತಿಕ್ರಿಯೆ ಏನು?

Anupam Kher Allu Arjun

ಬೆಂಗಳೂರು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (69th National Film Awards 2023) ವಿವೇಕ್ ಅಗ್ನಿಹೋತ್ರಿಯವರ ʻದಿ ಕಾಶ್ಮೀರ್ ಫೈಲ್ಸ್ʼ ರಾಷ್ಟ್ರೀಯ ಏಕತೆ ಸಾರುವ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿನ ನಟನೆಗಾಗಿ ಪಲ್ಲವಿ ಜೋಶಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಪ್ರಕಟಣೆ ಬಳಿಕ ನಟ ಅನುಪಮ್ ಖೇರ್ (Anupam Kher) ತಮ್ಮ ಟ್ವಿಟರ್‌ನಲ್ಲಿ ಪ್ರಶಸ್ತಿ ಬಗ್ಗೆ ಸಂತಸ ಹಂಚಿಕೊಂಡರು. ಅಷ್ಟೇ ಅಲ್ಲದೇ ಈ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದೂ ಉಲ್ಲೇಖಿಸಿದ್ದಾರೆ. ಪುಷ್ಪ ದಿ ರೈಸ್ (Allu Arjun for the movie Pushpa: The Rise) ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ಅನುಪಮ್‌ ಖೇರ್‌ ಟ್ವೀಟ್‌ ಕಂಡು ನಟ ಪ್ರಶಸ್ತಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಜನ ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

ಅನುಪಮ್‌ ಖೇರ್‌ ತಮ್ಮ ಟ್ವೀಟ್‌ನಲ್ಲಿ ʻʻದಿ ಕಾಶ್ಮೀರ್ ಫೈಲ್ಸ್‌ ರಾಷ್ಟ್ರೀಯ ಏಕತೆ ಸಾರುವ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ. ನಟನಾಗಿ ಮಾತ್ರವಲ್ಲದೆ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿಯೂ ನಮ್ಮ ಚಿತ್ರಕ್ಕೆ ಈ ಮನ್ನಣೆ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ನಟನೆಗಾಗಿಯೂ ಪ್ರಶಸ್ತಿ ಗೆಲ್ಲಲು ಇಷ್ಟಪಡುತ್ತಿದ್ದೆ. ಆದರೆ ಈಗಲೇ ಎಲ್ಲ ಆಸೆಗಳು ಪೂರ್ಣಗೊಂಡರೆ ಮುಂದೆ ಮಾಡುವ ಕೆಲಸಕ್ಕೆ ಉತ್ಸಾಹ ಆದರೂ ಹೇಗೆ ಬರುತ್ತದೆ? ಮುಂದಿನ ಬಾರಿ ನೋಡೋಣ! ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಜೈ ಹೋ!” ಎಂದು ಖೇರ್‌ ಬರೆದಿದ್ದಾರೆ. ʼದಿ ಕಾಶ್ಮೀರ್ ಫೈಲ್ಸ್‌ʼನಲ್ಲಿ ನಟಿಸಿದ ಪಲ್ಲವಿ ಜೋಶಿ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹೀಗಿರುವಾಗ ಅನುಪಮ್‌ ಖೇರ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಬೇಕಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: National Film Awards 2023: ಕನ್ನಡಕ್ಕೆ ಒಟ್ಟು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ!

ಅನುಪಮ್‌ ಖೇರ್‌ ಟ್ವೀಟ್‌

ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಅಲ್ಲು ಅರ್ಜುನ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದಕ್ಕೆ ಅನುಪಮ್ ಖೇರ್ ಬೇಸರಗೊಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ. ಇನ್ನು ಕೆಲವರು ಅನುಪಮ್ ಖೇರ್ ಅವರಿಗೆ ಪ್ರಶಸ್ತಿ ಬರಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Anupam Kher: 538ನೇ ಚಿತ್ರ ಅನೌನ್ಸ್‌ ಮಾಡಿದ ಅನುಪಮ್ ಖೇರ್; ಗುರುತೇ ಸಿಗಲ್ಲಿಲ್ಲ ಅಂದ್ರು ಫ್ಯಾನ್ಸ್!

ಜಮ್ಮು-ಕಾಶ್ಮೀರದಲ್ಲಿ 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಹಿಂಸಾಚಾರದ ಕುರಿತ ಕಥಾ ಹಂದರವಿರುವ ‘ದಿ ಕಾಶ್ಮೀರ್‌ ಫೈಲ್ಸ್’‌ ಸಿನಿಮಾ ದೇಶಾದ್ಯಂತ ಹಿಟ್‌ ಆದ, ಕೆಲವೊಂದಿಷ್ಟು ವಿವಾದಕ್ಕೂ ಕಾರಣವಾದ ಬೆನ್ನಲ್ಲೇ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (Vivek Agnihotri) ಅವರು ದಿ ಕಾಶ್ಮೀರ್‌ ಫೈಲ್ಸ್‌ ಪಾರ್ಟ್‌ 2 ಈಗಾಗಲೇ ಘೋಷಿಸಿದ್ದಾರೆ.

ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರದ ಸಂಪೂರ್ಣ ಚಿತ್ರ ಇದರಲ್ಲಿ ಇರಲಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. ಆದರೆ, ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಪಾತ್ರಧಾರಿಗಳು ಸೇರಿ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ. ದಿ ಕಾಶ್ಮೀರ್‌ ಫೈಲ್ಸ್‌ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಉತ್ತಮ ಪ್ರದರ್ಶನ ಕಂಡಿತ್ತು.

ಅನುಪಮ್ ಖೇರ್ ಶೀಘ್ರದಲ್ಲೇ ಕಂಗನಾ ರಣಾವತ್‌ ನಿದೇಶನದ ʼಏಮರ್ಜೆನ್ಸಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ನವೆಂಬರ್ 24ರಂದು ʼಎಮರ್ಜೆನ್ಸಿʼ ಸಿನಿಮಾ ತೆರೆ ಕಾಣಲಿದೆ.

ಅನುಪಮ್ ಖೇರ್‌ (Anupam Kher) ತಮ್ಮ 538ನೇ ಚಿತ್ರವನ್ನು ಘೋಷಿಸಿದ್ದಾರೆ. ಜುಲೈ 8ರಂದು ಅನುಪಮ್ ಖೇರ್ ಇನ್‌ಸ್ಟಾಗ್ರಾಮ್‌ ಮೂಲಕ ರವೀಂದ್ರನಾಥ ಟ್ಯಾಗೋರ್ ಪಾತ್ರವನ್ನು ಮಾಡುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಚಿತ್ರದ ಹೆಸರನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

Exit mobile version