Site icon Vistara News

Anurag Kashyap: ತಮ್ಮನ್ನು ಭೇಟಿಯಾಗಬೇಕಾದರೆ 10-15 ನಿಮಿಷಕ್ಕೆ 1 ಲಕ್ಷ ರೂ. ಪಾವತಿಸಿ; ಬೇಡಿಕೆ ಮುಂದಿಟ್ಟ ಬಾಲಿವುಡ್‌ ನಿರ್ದೇಶಕ

anurag kashyap

anurag kashyap

ಮುಂಬೈ: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಹೊಸದೊಂದು ಪೋಸ್ಟ್‌ ಮೂಲಕ ಗಮನ ಸೆಳೆದಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುವ ವ್ಯಕ್ತಿಗಳು 10-15 ನಿಮಿಷಕ್ಕೆ 1 ಲಕ್ಷ ರೂ. ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

ಕಾರಣವೇನು?

‘ಗ್ಯಾಂಗ್ಸ್ ಆಫ್ ವಾಸೇಪುರ್’ ಸೇರಿದಂತೆ ಕೆಲವು ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿರುವ ಅನುರಾಗ್ ಕಶ್ಯಪ್, ತಮ್ಮನ್ನು ಭೇಟಿ ಮಾಡಲು ಬರುವವರು ಹಣ ಕೊಡಬೇಕೆಂಬ ಷರತ್ತು ವಿಧಿಸುತ್ತಿರುವುದು ದುಡ್ಡು ಮಾಡುವ ಉದ್ದೇಶದಿಂದ ಅಲ್ಲವಂತೆ. ಬದಲಿಗೆ ತಮ್ಮನ್ನು ಭೇಟಿಯಾಗಲು ಬರುವ ಜನರಿಂದ ಆಗುತ್ತಿರುವ ಸಮಸ್ಯೆಯಿಂದಾಗಿ ಈ ನಿರ್ಣಯವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ʼʼಹೊಸಬರಿಗೆ ಸಹಾಯ ಮಾಡಲು ಸಾಕಷ್ಟು ಸಮಯ ವ್ಯರ್ಥ ಮಾಡಿದ್ದೇನೆ. ಹೀಗಾಗಿ ಇನ್ನು ಮುಂದೆ ತಮ್ಮನ್ನು ತಾವು ಸೃಜನಶೀಲ ಪ್ರತಿಭೆ ಎಂದುಕೊಳ್ಳುವವರನ್ನು ಭೇಟಿಯಾಗಿ ನನ್ನ ಸಮಯವನ್ನು ಹಾಳು ಮಾಡಲು ಬಯಸುವುದಿಲ್ಲ. ಹೀಗಾಗಿ ನಾನು ದರಗಳನ್ನು ನಿಗದಿಪಡಿಸಿದ್ದೇನೆʼʼ ಎಂದು ಹೇಳಿದ್ದಾರೆ.

ಮುಂದುವರಿದು, ʼʼಯಾರಾದರೂ ನನ್ನನ್ನು ಭೇಟಿ ಮಾಡಲು ಬಯಸಿದರೆ 10-15 ನಿಮಿಷಕ್ಕೆ 1 ಲಕ್ಷ ರೂ., ಅರ್ಧ ಗಂಟೆಗೆ 2 ಲಕ್ಷ ರೂ. ಮತ್ತು 1 ಗಂಟೆಗೆ 5 ಲಕ್ಷ ರೂ. ಪಾವತಿಸಬೇಕು. ಈ ಮೊತ್ತ ಪಾವತಿಸಬಹುದು ಎನಿಸಿದರೆ ನನಗೆ ಕರೆ ಮಾಡಿ. ಇಲ್ಲದಿದ್ದರೆ ಭೇಟಿಯಾಗಲು ಪ್ರಯತ್ನಿಸಬೇಡಿ. ಜತೆಗೆ ಈ ಹಣವನ್ನು ಭೇಟಿಗೆ ಮುಂಚಿತವಾಗಿ ಪಾವತಿಸುವುದು ಕಡ್ಡಾಯʼʼ ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲ ʼʼನನಗೆ ಮೆಸೇಜ್ ಮಾಡುವುದು, ಇನ್​ಸ್ಟಾಗ್ರಾಂನಲ್ಲಿ ಖಾಸಗಿ ಸಂದೇಶ ಕಳಿಸುವುದು ಇದೆಲ್ಲವನ್ನೂ ಮಾಡಬೇಡಿ. ದಯವಿಟ್ಟು ನನ್ನಿಂದ ದೂರವಿರಿ, ನಾನು ಸೇವಾ ಸಂಘ ಅಲ್ಲʼʼ ಎಂದು ಖಡಕ್‌ ಆಗಿಯೇ ಅವರು ಹೇಳಿದ್ದಾರೆ.

ಕೆಲವರು ಅನುರಾಗ್‌ ಅವರ ಈ ಬೋಲ್ಡ್‌ ಹೇಳಿಕೆಯನ್ನು ಮೆಚ್ಚಿದ್ದಾರೆ. ʼʼನಾನು ಇದನ್ನೇ ಯೋಚಿಸುತ್ತಿದ್ದೇನೆʼʼ ಎಂದು ಚಿತ್ರ ನಿರ್ಮಾಪಕ ಶೇಖರ್‌ ಕಪೂರ್‌ ಬೆಂಬಲ ಸೂಚಿಸಿದ್ದಾರೆ.

‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದ್ದ ಅನುರಾಗ್ ಕಶ್ಯಪ್

ʼ‘ಕಾಂತಾರ’ದಂತಹ ಚಿತ್ರಗಳಿಂದ ಬಾಲಿವುಡ್‌ ಸಂಪೂರ್ಣವಾಗಿ ನಾಶವಾಗುತ್ತಿದೆ. ಅನುಕರಣೆಯಿಂದಾಗಿ ಬಾಲಿವುಡ್‌ ಹೀನಾಯವಾಗಿ ಸೋತಿದೆ. ಹೊಸ ಸಿನಿಮಾಗಳು ನೆಲ ಕಚ್ಚುತ್ತಿವೆʼʼ ಎಂದು ಈ ಹಿಂದೆ ಹೇಳಿಕೆ ನೀಡಿ ಅನುರಾಗ್ ಕಶ್ಯಪ್ ಸಂಚಲನ ಮೂಡಿಸಿದ್ದರು. 

ಅವರು ಬಾಲಿವುಡ್ ಸೋಲಿಗೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದರು. ಅಂದು ಕನ್ನಡದ ಸೂಪರ್ ಹಿಟ್ ಸಿನಿಮಾ ʼಕೆಜಿಎಫ್ 2ʼ ಅನ್ನು ಉದಾಹರಣೆಯಾಗಿ ನೀಡಿದ್ದರು. ಸಂವಾದವೊಂದರಲ್ಲಿ ಮಾತನಾಡಿದ್ದ ಅನುರಾಗ್, ʼʼಅನುಕರಣೆ ಮಾಡಿ ಬಾಲಿವುಡ್‌ ಹೀನಾಯವಾಗಿ ಸೋತಿದೆ. ಬರುತ್ತಿರುವ ಸಿನಿಮಾಗಳು ನೆಲ ಕಚ್ಚುತ್ತಿವೆ. ಹಾಗೆ ಮಾಡಬಾರದುʼʼ ಎಂದು ಹೇಳಿದ್ದರು.

ʼʼಕಾಂತಾರʼ ಮತ್ತು ʼಪುಷ್ಪʼ ಸಿನಿಮಾಗಳು ತಮ್ಮ ತಮ್ಮ ನೆಲದ ಕಥೆಯನ್ನು ಹೇಳಿದವು. ಹಾಗಾಗಿ ಗೆದ್ದವು. ಆದರೆ ʼಕೆಜಿಎಫ್ 2ʼ ಹಾಗಲ್ಲ. ಅದನ್ನು ಅನುಕರಿಸಲು ಹೋದರೆ ಸೋಲು ಗ್ಯಾರಂಟಿʼʼ ಎಂದಿದ್ದರು ಅನುರಾಗ್‌. ಮರಾಠಿ ಚಿತ್ರರಂಗದ ಉದಾಹರಣೆಯನ್ನೂ ನೀಡಿದ್ದ ಅವರು, ʼʼಸೈರಾಟ್ʼ ಸಿನಿಮಾ ಮರಾಠಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತ್ತು. ಕಡಿಮೆ ಬಜೆಟ್‌ನಲ್ಲಿ ತಗೆದ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಯಿತು. ಆ ಸಿನಿಮಾವನ್ನೇ ಮಾದರಿಯಾಗಿಟ್ಟುಕೊಂಡು ಚಿತ್ರ ಮಾಡಿದರು. ಮುಂದೆ ಏನಾಯಿತು ಎಂದು ಯೋಚಿಸಿʼʼ ಎಂದು ಹೇಳಿದ್ದರು.

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

Exit mobile version