ಕಾವೇರಿ ಭಾರದ್ವಾಜ್
ಒಬ್ಬ ಮೇರುನಟನ ಮಗ ಅನ್ನೋ ಹಮ್ಮು ಬಿಮ್ಮು ಇಲ್ಲದಿರುವ ಶ್ರೇಷ್ಠ ಕಲಾವಿದ ಅಂದ್ರೆ ಅಪ್ಪು ಮಾತ್ರ. ನಾನು ಅಪ್ಪುನ ನೋಡಿರೋದು ತೆರೆಯ ಮೇಲೆ ಮಾತ್ರ. ಪಕ್ಕದಲ್ಲಿ ನಿಂತು ಪೋಟೋ ತೆಗಿಸಿಕೊಳ್ಳಬೇಕು ಎಂಬ ಆಸೆ ಆಸೆಯಾಗಿಯೇ ಉಳಿಯಿತು. ಎಲ್ಲಾ ವರ್ಗದ ಜನರೊಂದಿಗೆ ಬಹಳ ಸರಳವಾಗಿ ಪ್ರೀತಿಯಿಂದ ಬೆರೆಯುವ ವ್ಯಕ್ತಿತ್ವ. ಊಟ, ತಿಂಡಿ ಯಲ್ಲಿ ಅಂತಹ ನಿಗರ್ವಿ ಕಾಣ ಸಿಗುವುದು ಕಷ್ಟ. ಒಬ್ಬ ಸೆಲೆಬ್ರಿಟಿಯ ಮಗ, ತಾನೂ ಕೂಡ ಸೆಲೆಬ್ರಿಟಿ ಎಂಬ ಯಾವ ದೊಡ್ಡಸ್ತಿಕೆಯ ಭಾವನೆಯನ್ನು ರೂಢಿಸಿಕೊಳ್ಳದೇ ಬದುಕಿದ ಜೀವ ಎಂದೂ ಜೀವಂತ.
ಬಾಲನಟನಾಗಿ ಚಿತ್ರರಂಗಕ್ಕೆ ಬಂದು ನಟನೆಗೂ ಸೈ ಸಮಾಜ ಸೇವೆಗೂ ಜೈ. ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದ ಶ್ರೇಷ್ಠ ಪ್ರತಿಭೆ ಅಪ್ಪು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ನನ್ನ ಫೇವರಿಟ್ ಸಿನಿಮಾ ಪೃಥ್ವಿ. ಇದು ಕೇವಲ ಸಿನಿಮಾ ಆಗಿರದೇ ಪ್ರೀತಿ, ಸಂಬಂಧಗಳನ್ನು ನಿರ್ವಹಿಸುವ ಜೊತೆ ಜೊತೆಗೆ ಸಮಾಜದಲ್ಲಿರುವ ಭ್ರಷ್ಟಾಚಾರವನ್ನೂ ನಿರ್ಮೂಲನೆ ಮಾಡುವಲ್ಲಿ ಮುಂದಾಗುವ ನಾಯಕನ ಕಥೆ. ಯುವ ಪೀಳಿಗೆಗೆ ಮಾದರಿಯಾಗುವ, ಪೃಥ್ವಿಯಾಗಿ ಅಭಿನಯಿಸಿರುವ ಪವರ್ ಸ್ಟಾರ್ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಮನ ಗೆದ್ದಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಹುಡುಗ ಸತತ ಪರಿಶ್ರಮದಿಂದ ಐಎಎಸ್ ಮಾಡಿ ಸೇವೆಗೆ ನಿಲ್ಲುವ ಪರಿ, ಆ ಸಮಯದಲ್ಲಿ ಎದುರಾಗುವ ಸವಾಲುಗಳು ಅದನ್ನು ಎದುರಿಸುವ ವಿಧ ಬಹಳ ಸಮಯೋಚಿತವಾಗಿ ತೆರೆಯ ಮೇಲೆ ಮೂಡಿ ಬಂದಿದೆ. ಇಂದಿಗೂ ಪೃಥ್ವಿ ನನ್ನ ಮನದಲ್ಲಿ ಆಳವಾಗಿ ಬೇರೂರಿರುವ ಸಿನಿಮಾ. ಅಪ್ಪು ಮೇಲಿನ ಪ್ರೀತಿ ಅಭಿಮಾನಿಗಳು ಪ್ರತಿ ಬಾರಿ ಈ ಸಿನಿಮಾ ನೋಡುವಾಗಲೆಲ್ಲ ಹೆಚ್ಚಾಗುತ್ತದೆ.