Site icon Vistara News

Apthamitra | ಆಪ್ತಮಿತ್ರ ಚಿತ್ರಕ್ಕೆ 18 ವರ್ಷ: ಖುಷಿ ಹಂಚಿಕೊಂಡ ರಮೇಶ್‌ ಅರವಿಂದ್‌

Apthamitra

ಬೆಂಗಳೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರ ಟಾಪ್‌ ಐದು ಸಿನಿಮಾಗಳಲ್ಲಿ ಆಪ್ತಮಿತ್ರ (Apthamitra) ಸಿನಿಮಾ ಕೂಡ ಒಂದು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 18 ವರ್ಷ. ಈ ಸುದ್ದಿಯನ್ನು ನಟ ರಮೇಶ್‌ ಅರವಿಂದ್‌ ಅವರು ಇನ್ಸ್ಟಾ ಮೂಲಕ ಖುಷಿಯೊಂದಿಗೆ ಹಂಚಿಕೊಂಡಿದ್ದಾರೆ.

2004ರಲ್ಲಿ ಈ ಚಿತ್ರ ಬಿಡುಗಡೆಗೊಂಡಿತ್ತು. ಇದು ಸೈಕಾಲಾಜಿಕಲ್‌ ಥ್ರಿಲರ್‌ ಸಿನಿಮಾ ಆಗಿದ್ದು, ಮಲಯಾಳಂನ ʻಮಣಿಚಿತ್ರತ್ತಾಳ್‌ʼ ರಿಮೇಕ್‌ ಆಗಿತ್ತು. ಕನ್ನಡದಲ್ಲಿ ಪಿ. ವಾಸು ಅವರು ನಿರ್ದೇಶನ ಮಾಡಿದ್ದರು. ಡಾ. ವಿಜಯ್‌ ಪಾತ್ರದಲ್ಲಿ ಡಾ. ವಿಷ್ಣುವರ್ಧನ್‌ ಅವರು ಮಿಂಚಿದರೆ, ಗಂಗಾ ಮತ್ತು ನಾಗವಲ್ಲಿಯಾಗಿ ನಟಿ ಸೌಂದರ್ಯ ನಟಿಸಿದ್ದರು. ದುರದೃಷ್ಟಕರ ವಿಚಾರ ಅಂದರೆ ಈ ಎರಡೂ ಪಾತ್ರಕ್ಕೆ ಜೀವ ತುಂಬಿದ್ದ ವಿಷ್ಣುವರ್ಧನ್‌ ಹಾಗೂ ನಟಿ ಸೌಂದರ್ಯ ನಮ್ಮೊಂದಿಗೆ ಇಲ್ಲ. ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಹಿರಿಯ ನಟ ಶಿವರಾಮ್ ಮತ್ತು ಸತ್ಯಜಿತ್‌ ಅವರು ಕೂಡ ನಿಧನರಾಗಿದ್ದಾರೆ.

ಇದನ್ನೂ ಓದಿ | Dulquer Salmaan | ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಜನುಮದಿನದ ಸಂಭ್ರಮ

ಗೆಳೆಯನಾಗಿ ರಮೇಶ್ ಅರವಿಂದ್, ನಟಿ ಪ್ರೇಮಾ, ಸತ್ಯಜಿತ್, ದ್ವಾರಕೀಶ್, ಪ್ರಮೀಳಾ ಜೋಷಾಯ್, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ದ್ವಾರಕೀಶ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾಗೆ ಗುರುಕಿರಣ್‌ ಸಂಗೀತ ನೀಡಿದ್ದರು. ರಾ..ರಾ..ಸರಸಕು ರಾರಾ ಹಾಡು ಸಖತ್‌ ಹಿಟ್‌ ಕಂಡಿತ್ತು.

ಚಿತ್ರಮಂದಿರಗಳಲ್ಲಿ ಈ ಚಿತ್ರ 1 ವರ್ಷ ಪ್ರದರ್ಶನ ಕಂಡಿತ್ತು. ಈ ಸಿನಿಮಾಕ್ಕೆ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಲಭಿಸಿವೆ. ಡಾ. ವಿಷ್ಣುವರ್ಧನ್‌, ಸೌಂದರ್ಯಾ ಅವರಿಗೆ ಅತ್ಯುತ್ತಮ ನಟ- ನಟಿ ಪ್ರಶಸ್ತಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ಪ್ರಶಸ್ತಿಗಳು ಸಿಕ್ಕಿದ್ದವು. ಇದೇ ಸಿನಿಮಾವನ್ನು ತಮಿಳಿನಲ್ಲಿ ಪಿ. ವಾಸು ಅವರು ʻಚಂದ್ರಮುಖಿʼ ಹೆಸರಿನಲ್ಲಿ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ರಜನಿಕಾಂತ್‌ ಹೀರೊ ಆಗಿದ್ದರು.

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

Exit mobile version