ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ನೆರವೇರಿದೆ. ಮೊದಲ ದೃಶ್ಯಕ್ಕೆ ಗೀತಾ ಶಿವರಾಜ್‌ಕುಮಾರ್ ಕ್ಲಾಪ್ ಮಾಡಿ ಚಾಲನೆ ನೀಡಿದ್ದಾರೆ. ಈ ಸಿನಿಮಾವನ್ನು ‘ಗಾಳಿಪಟ 2’ ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ (Arjun Janya) ನಿರ್ದೇಶನದ ಈ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ನಿರ್ಮಾಪಕರಿಗೆ ಸಿನಿಮಾ ತೋರಿಸಿದ್ದರಂತೆ. ಅದು ಕೂಡ ಆನಿಮೇಶನ್ ರೂಪದಲ್ಲಿ ಎಂದರೆ ನೀವು ನಂಬಲೇಬೇಕು.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಶಿವರಾಜ್‌ಕುಮಾರ್ ಈ ಸಿನಿಮಾ ಕುರಿತು ಮಾತನಾಡಿ ʻʻಇದೊಂದು ಫಿಲಾಸಫಿಕಲ್ ಎಂಟರ್ಟೈನರ್. ಕಳೆದ ಒಂದು ವರ್ಷದಿಂದ ಈ ಸಿನಿಮಾ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟ ಆಗಿತ್ತು. ಆ ನಂತರ ಆನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಇದರಲ್ಲಿ ನನ್ನದು ತುಂಬಾ ಪ್ರಬುದ್ಧವಾಗಿರುವ ಪಾತ್ರ ” ಎಂದು ಹೇಳಿದರು.
ರಾಜ್ ಬಿ ಶೆಟ್ಟಿ ಮಾತನಾಡಿ ʻʻಸಾಮಾನ್ಯವಾಗಿ ನಿರ್ದೇಶಕರು ನಟರಿಗೆ ಸಿನಿಮಾದ ಕಥೆ ಹೇಳುತ್ತಾರೆ. ಆದರೆ, ಅರ್ಜುನ್ ಜನ್ಯ ನನಗೆ ಸಿನಿಮಾವನ್ನೇ ತೋರಿಸಿದ್ದಾರೆ. ಒಂದು ಸಿನಿಮಾ ಮಾಡುವಾಗ ನಾವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇವೆ. ಹೀಗಾಗಿ ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಹೀಗಾಗಿ ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ” ಎಂದರು. ನನ್ನರಸಿ ರಾಧೆ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಕೌಸ್ತುಭಾ ಈ ಸಿನಿಮಾದ ನಾಯಕಿ.
ಇದನ್ನೂ ಓದಿ; Upcoming Movies: ನಾಳೆ ತೆರೆ ಕಾಣಲಿರುವ ಸಿನಿಮಾಗಳಿವು!
‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಸಿನಿಮಾಗೆ ರಮೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ‘ನಾತಿಚರಾಮಿ’, ‘ಗಾಳಿಪಟ 2’ ಮೊದಲಾದ ಸಿನಿಮಾಗಳನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಈಗ ಅವರು ಶಿವಣ್ಣ-ಅರ್ಜುನ್ ಜನ್ಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.