ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi). ಡಾ. ರಾಜ್ ಕುಮಾರ್ ಸೇರಿದಂತೆ ಹಲವು ಮೇರು ಕಲಾವಿದರ ಜತೆ ಅವರು ಅಭಿನಯಿಸಿದ್ದಾರೆ. ನೂರಾರು ನೆನಪಿನಲ್ಲಿ ಉಳಿಯುವಂತಹ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಅವರು ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು, ನೆಲಮಂಗಲ ತಾಲೂಕಿನಲ್ಲಿರುವ ಅವರ ತೋಟದ ಮನೆಗೆ ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಭಾವುಕರಾದ ಅರ್ಜುನ್ ಸರ್ಜಾ
ಹಾಸಿಗೆ ಹಿಡಿದಿರುವ ಲೀಲಾವತಿ ಅವರನ್ನು ನೋಡಿ ಅರ್ಜುನ್ ಸರ್ಜಾ ಭಾವುಕರಾದರು. ಲೀಲಾವತಿ ಅವರ ಆರೋಗ್ಯಕ್ಕಾಗಿ ಆಂಜನೇಯ ಸ್ವಾಮಿ ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳಿದರು. ಬಳಿಕ ಹಾಸಿಗೆ ಹಿಡಿದ ಲೀಲಾವತಿ ಅವರಿಗೆ ಮುತ್ತಿಟ್ಟು ಅರ್ಜುನ್ ಸರ್ಜಾ ನಮಿಸಿದರು. ಲೀಲಾವತಿ ಪುತ್ರ ವಿನೋದ್ ರಾಜ್ ಜತೆಗೂ ಸಮಾಲೋಚನೆ ನಡೆಸಿದರು.
ಬ್ಲ್ಯಾಕಿಯನ್ನು ಮಾತನಾಡಿಸಿದ ಅರ್ಜುನ್ ಸರ್ಜಾ
ಲೀಲಾವತಿ ಮನೆಯಲ್ಲಿ ಅರ್ಜುನ್ ಸರ್ಜಾ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾದರು. ಲೀಲಾವತಿ ಮನೆಯ ಸಾಕು ನಾಯಿ ಬ್ಲ್ಯಾಕಿ ಅರ್ಜುನ್ ಸರ್ಜಾ ಜತೆಗೆ ತನ್ನದೇ ಭಾಷೆಯಲ್ಲಿ ಮಾತುಕತೆ ನಡೆಸಿತು. ಲೀಲಾವತಿ ಹಾಸಿಗೆ ಹಿಡಿದಿರುವ ಕುರಿತು ಬೇಸರ ವ್ಯಕ್ತಪಡಿಸಿತು. ಅರ್ಜುನ್ ಸರ್ಜಾ ಲೀಲಾವತಿ ಭೇಟಿ ತೆರಳಿದಾಗ ಅವರ ಮನೆಯ ನಾಯಿಯನ್ನೂ ಮಾತನಾಡಿಸಿ, ʼʼಅಮ್ಮ ಎಲ್ಲಿ?ʼʼ ಎಂದು ಕೇಳಿದರು. ಅದಕ್ಕೆ ಬ್ಲ್ಯಾಕಿ ನೋವಿನಿಂದ ಕೂಗಿ ಲೀಲಾವತಿ ಕಡೆಗೆ ನೋಡಿತ್ತು. ಬಳಿಕ ಅರ್ಜುನ್ ಸರ್ಜಾಗೆ ಶೇಕ್ ಹ್ಯಾಂಡ್ ನೀಡಿತ್ತು.
ಸದ್ಯ ಲೀಲಾವತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂನ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಪೈಕಿ 400ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಎನ್ನುವುದು ವಿಶೇಷ. ಇವರಿಗೆ 1999-2000 ಸಾಲಿನಲ್ಲಿ ಕರ್ನಾಟಕ ಚಲನಚಿತ್ರರಂಗದ ಜೀವಮಾನದ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜ್‌ಕುಮಾರ್ ಪ್ರಶಸ್ತಿ ನೀಡಲಾಗಿತ್ತು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು.
DK Shivakumar: ಹಿರಿಯ ನಟಿ ಡಾ.ಲೀಲಾವತಿ, ವಿನೋದ್ ರಾಜ್ ಮನವಿಗೆ ಸ್ಪಂದಿಸಿದ ಡಿಕೆಶಿ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ನಾಟಕ ಮತ್ತು ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. 1949ರಲ್ಲಿ ಶಂಕರ್‌ಸಿಂಗ್ ಅವರ ʻನಾಗಕನ್ನಿಕೆʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ʻಮಾಂಗಲ್ಯ ಯೋಗʼ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ಮೊದಲಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿ ತಮ್ಮನ್ನು ತೊಡಗಿಸಿಕೊಂಡರು.
ಈ ಹಿಂದೆಯೂ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಹಲವು ತಾರೆಯರು ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಾಥ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಪದ್ಮಾ ವಾಸಂತಿ, ಶಶಿಕಲಾ, ಶ್ರುತಿ, ಸುಧಾರಾಣಿ, ತಾರಾ, ಮಾಳವಿಕಾ ಅವಿನಾಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಮತ್ತಿತರರು ಆರೋಗ್ಯ ವಿಚಾರಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ