ಮುಂಬೈ ಸಮೀಪದ ಕರ್ಜತ್ ಸ್ಟುಡಿಯೊದಲ್ಲಿ ಆಗಸ್ಟ್ 2ರಂದು ಶವವಾಗಿ ಪತ್ತೆಯಾದ ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ (Art Director Nitin Desai) ಅವರು ಸಾಯುವ ಮೊದಲು 11 ಆಡಿಯೊ ಸಂದೇಶಗಳನ್ನು ರೆಕಾರ್ಡ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಡಿಯೊ ರೆಕಾರ್ಡರ್ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ದೇಸಾಯಿ ಅವರು ಆಡಿಯೊ ಸಂದೇಶಗಳಲ್ಲಿ, ತಮಗೆ ಕಿರುಕುಳ ನೀಡಿದ ಕೆಲವು ಜನರನ್ನು ಹೆಸರಿಸಿದ್ದಾರೆ. ಆದರೆ ಪೊಲೀಸರು ಹೆಸರನ್ನು ಮಾತ್ರ ಬಹಿರಂಗಪಡಿಸುತ್ತಿಲ್ಲ. ಎಫ್‌ಎಸ್‌ಎಲ್ ವರದಿಯ ನಂತರ ತನಿಖೆ ಇನ್ನಷ್ಟು ತಿರುವು ಪಡೆದುಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದಾರೆ.
ಆಗಸ್ಟ್ 3ರಂದು ಮರಣೋತ್ತರ ಪರೀಕ್ಷೆಯನ್ನು ನಾಲ್ವರು ವೈದ್ಯರ ತಂಡ ನಡೆಸಿತ್ತು. ಮರಣೋತ್ತರ ವರದಿ ಪ್ರಕಾರ ನಿತಿನ್ ಚಂದ್ರಕಾಂತ್ ದೇಸಾಯಿ ನೇಣು ಬಿಗಿದುಕೊಂಡೇ ಮೃತಪಟ್ಟಿರುವುದಾಗಿ ರಾಯಗಢ ಪೊಲೀಸರು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Art Director Nitin Desai: ನಿತಿನ್ ಪೋಸ್ಟ್ ಮಾರ್ಟಂ ವರದಿಯಲ್ಲಿ ಏನಿದೆ? ಆತ್ಮಹತ್ಯೆಗೆ ಕಾರಣವೇನು?
ಇದಕ್ಕೂ ಮುನ್ನ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರ ಮೃತದೇಹವನ್ನು ಖಲಾಪುರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ತಂದಿದ್ದರು. ನಿತಿನ್ ದೇಸಾಯಿ ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅವರ ಸ್ಟುಡಿಯೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಜುಲೈ 2ರಂದು ತಿಳಿಸಿದ್ದರು. ಪೊಲೀಸರ ಪ್ರಕಾರ ದೇಸಾಯಿ ಅವರು ಮುಂಬೈನ ಹೊರಗೆ ಸುಮಾರು 80 ಕಿಮೀ ದೂರದಲ್ಲಿರುವ ಕರ್ಜತ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೊದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು.
ಬಿಜೆಪಿ ಶಾಸಕ ಮಹೇಶ್ ಬಾಲ್ಡಿ ಈ ಬಗ್ಗೆ , ‘ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ನಿತಿನ್, ಎರಡು ತಿಂಗಳ ಹಿಂದೆ ನನ್ನ ಬಳಿ ಈ ವಿಷಯವನ್ನು ಹಂಚಿಕೊಂಡಿದ್ದರು. ತಮ್ಮ ಎನ್‌ಡಿ ಸ್ಟುಡಿಯೊ ಪರಿಸ್ಥಿತಿ ಉತ್ತಮವಾಗಿಲ್ಲ. ಚಿತ್ರೀಕರಣಗಳು ನಡೆಯುತ್ತಿಲ್ಲ. ಮಳೆಗಾಲದ ನಂತರ ಚಿತ್ರಗಳು ಬರಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದರು. ಆರ್ಥಿಕ ಸಂಕಷ್ಟವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಿರಬಹುದು’ ಎಂತಲೂ ಹೇಳಿಕೆ ನೀಡಿದ್ದರು. ಪ್ರಸ್ತುತ, ಪ್ರಕರಣವನ್ನು ಆಕಸ್ಮಿಕ ಮರಣ ಎಂದು ಎಡಿಆರ್ ದಾಖಲಿಸಿಗೊಂಡಿದೆ. ಕಲಾ ನಿರ್ದೇಶಕ ಸಾವಿಗೆ ಸಾಲದ ಹೊರೆಯೇ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.