ಖ್ಯಾತ ಚಲನಚಿತ್ರ ಕಲಾ ನಿರ್ದೇಶಕ ನಿತಿನ್ ದೇಸಾಯಿ (Art Director Nitin Desai) ಅವರ ಸಾವಿಗೆ ಚಿತ್ರೋದ್ಯಮದ ಹಲವರು ಶೋಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ತಮ್ಮ ಎನ್‌ಡಿ ಸ್ಟುಡಿಯೊದಲ್ಲಿ ಆಗಸ್ಟ್ 2ರಂದು ಅವರು ಶವವಾಗಿ ಪತ್ತೆಯಾಗಿದ್ದರು. ಆಗಸ್ಟ್ 9ರಂದು ಅವರು ಬರ್ತ್ಡೇ ಆಚರಿಸಿಕೊಳ್ಳಬೇಕಿತ್ತು. ಅದಕ್ಕೂ ಮೊದಲೇ ಅವರು ಪ್ರಾಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ದುರಂತ. ಸದ್ಯ ತನಿಖೆ ಪ್ರಗತಿಯಲ್ಲಿದೆ. ನಿತಿನ್ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ದೇಸಾಯಿ ಅವರ ಹಠಾತ್ ಸಾವು ಚಿತ್ರರಂಗಕ್ಕೆ ಭಾರಿ ಆಘಾತ ಉಂಟಾಗಿದೆ. ರಿತೇಶ್ ದೇಶಮುಖ್, ವಿವೇಕ್ ಅಗ್ನಿಹೋತ್ರಿ, ಕುನಾಲ್ ಕೊಹ್ಲಿ ಮತ್ತು ನೀಲ್ ನಿತಿನ್ ಮುಖೇಶ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ದೇಸಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿ, “ನನ್ನ ಆತ್ಮೀಯ ಸ್ನೇಹಿತ ನಿತಿನ್ ದೇಸಾಯಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಲೆಜೆಂಡರಿ ಪ್ರೊಡಕ್ಷನ್ ಡಿಸೈನರ್, ಎನ್‌ಡಿ ಸ್ಟುಡಿಯೊ ನಿರ್ಮಿಸಿದ ದಾರ್ಶನಿಕ. ನಾವು ಒಟ್ಟಿಗೆ ಮಾಡಿರುವ ಚಿತ್ರಗಳಲ್ಲಿಯೂ ಅವರು ಯಾವಾಗಲೂ ನನಗೆ ಮಾರ್ಗದರ್ಶನ ನೀಡುತ್ತಿದ್ದರುʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Art Director Nitin Desai: ʻಲಗಾನ್ʼ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!
ನಟ ರಿತೇಶ್ ದೇಶ್‌ಮುಖ್ ಟ್ವೀಟ್ ಮಾಡಿ ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ನಿತಿನ್ ದೇಸಾಯಿ ಅಗಲಿರುವುದು ತೀವ್ರ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ನಾನು ಅವರನ್ನು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಮೃದು ಸ್ವಭಾವದ, ವಿನಮ್ರ, ಮಹತ್ವಾಕಾಂಕ್ಷೆಯ ವ್ಯಕ್ತಿ. ಓಂ ಶಾಂತಿʼʼಎಂದು ಬರೆದುಕೊಂಡಿದ್ದಾರೆ.
ನೀಲ್ ಟ್ವೀಟ್ ಮಾಡಿ, “ಈ ಸುದ್ದಿಯನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ನಮ್ಮ ಪ್ರೀತಿಯ ನಿತಿನ್ ದೇಸಾಯಿ ಅವರು ಸರಳ ವ್ಯಕ್ತಿಯಾಗಿದ್ದರು. ತಮ್ಮ ಕಲೆಯನ್ನು ಮಾತ್ರವಲ್ಲದೆ ಜನರನ್ನು ಅರ್ಥಮಾಡಿಕೊಂಡ ದಾರ್ಶನಿಕ ಕಲಾವಿದ. ಪ್ರೀತಿಯನ್ನು ಮಾತ್ರ ಕೊಡುವ ಪಾಸಿಟಿವ್ ಮನುಷ್ಯರಾಗಿದ್ದರು. ದೇವರು ಅವರ ಕುಟುಂಬಕ್ಕೆ ಶಕ್ತಿ ನೀಡಲಿ. ಓಂ ಶಾಂತಿ.” ಎಂದು ಬರೆದುಕೊಂಡಿದ್ದಾರೆ.
‘ಹಮ್ ದಿಲ್ ದೇ ಚುಕೇ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’, ‘ಲಗಾನ್’, ಮತ್ತು ‘ಬಾಜಿರಾವ್ ಮಸ್ತಾನಿ’ ಸೇರಿದಂತೆ ಕೆಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಅದ್ಧೂರಿ ಸೆಟ್‌ಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇವರು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ: Self Harming : ಟೂರಿಸ್ಟ್ ಟ್ಯಾಕ್ಸಿ ಚಾಲಕ ಆತ್ಮಹತ್ಯೆ, ಮೂಡಿಗೆರೆ ಬಾಣಸಿಗ ಕೇದಾರನಾಥದಲ್ಲಿ ಮೃತ್ಯು
ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ದೇಸಾಯಿ ಅವರು ಸಂಜಯ್ ಲೀಲಾ ಬನ್ಸಾಲಿ, ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಇತರರು ಸೇರಿದಂತೆ ಹಲವಾರು ಧೀಮಂತ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. 52 ಎಕರೆಯಲ್ಲಿ ಇರುವ ಇವರದ್ದೇ ಎನ್‌ಡಿ ಸ್ಟುಡಿಯೊ ಹಲವಾರು ಫಿಲ್ಮ್ ಸೆಟ್‌ಗಳಿಗೆ ನೆಲೆಯಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಜೋಧಾ ಅಕ್ಬರ್’. ಚಲನಚಿತ್ರಗಳು ಮಾತ್ರವಲ್ಲದೆ, ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಹಲವಾರು ಸೀಸನ್‌ಗಳನ್ನು ಎನ್‌ಡಿ ಸ್ಟುಡಿಯೋಸ್‌ನಲ್ಲಿ ಆಯೋಜಿಸಲಾಗಿದೆ.
ನಿತಿನ್ ಒಂದೆರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಹಲೋ ಜೈ ಹಿಂದ್!’ (2011) ಮತ್ತು ‘ಅಜಿಂತಾ’ (2012) ಪ್ರಮುಖ ಸಿನಿಮಾಗಳು. ಇವರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.