ಬೆಂಗಳೂರು: ಮಾಲಿವುಡ್ ನಟ ವಿಜಯಕುಮಾರ್ ಅವರ ಪುತ್ರಿ ಅರ್ಥನಾ ಬಿನು (Arthana Binu) ತಂದೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ಮತ್ತು ವಿಡಿಯೊದಲ್ಲಿ, ತಂದೆ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದರೆ ತನ್ನ ವೃತ್ತಿಜೀವನವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೊದಲ್ಲಿ, ನಟ ಕಿಟಕಿಯ ಮೂಲಕ ನಟಿಗೆ ಬೆದರಿಕೆ ಹಾಕುವುದನ್ನು ನೋಡಬಹುದು. ಅದಾದ ಬಳಿಕ ಗೋಡೆಯ ಮೇಲೆ ಹಾರಿ ಕಂಪೌಂಡ್‌ನಿಂದ ಜಿಗಿದು ಹೊರಹೋಗುತ್ತಿರುವುದು ಕಂಡುಬಂದಿದೆ. ತನ್ನ ತಂದೆ ತನ್ನ ಬಗ್ಗೆ ಅಪಪ್ರಚಾರದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನಟಿ ಅರ್ಥನಾ ಬಿನು ಹೇಳಿಕೊಂಡಿದ್ದಾರೆ.
ನಟಿ ಇನ್‌ಸ್ಟಾ ಪೋಸ್ಟ್‌ನಲ್ಲಿ ʻʻ ಪೋಸ್ಟ್ ಹಾಕಲು ಕಾರಣವೇನೆಂದರೆ ನಾನು ಬೆಳಗ್ಗೆ 9.45ರ ಸುಮಾರಿಗೆ ಸಹಾಯಕ್ಕಾಗಿ ಪೊಲೀಸ್ ಠಾಣೆಗೆ ಕರೆ ಮಾಡಿದರೂ ಯಾರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿಡಿಯೊದಲ್ಲಿರುವವರು ನನ್ನ ಸ್ವಂತ ಅಪ್ಪ. ಮಲಯಾಳಂ ನಟರೂ ಆಗಿದ್ದಾರೆ. ಈಗಾಗಲೇ ನನ್ನ ಪೋಷಕರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ನಾನು, ನನ್ನ ತಾಯಿ ಮತ್ತು ನನ್ನ ಸಹೋದರಿ ನಮ್ಮ ತಾಯಿಯ ಮನೆಯಲ್ಲಿ ಅಜ್ಜಿಯೊಂದಿಗೆ ವಾಸಿಸುತ್ತಿದ್ದೇವೆ. ಆತ ಹಲವು ವರ್ಷಗಳಿಂದ ಹೀಗೆ ಅತಿಕ್ರಮ ಪ್ರವೇಶ ಮಾಡುತ್ತಿದ್ದು, ಆತನ ವಿರುದ್ಧ ಹಲವು ಪೊಲೀಸ್ ಕೇಸ್‌ಗಳಿವೆ. ಇಷ್ಟಾದರೂ ಅವರು ನಮ್ಮ ಕಾಂಪೌಂಡ್‌ಗೆ ನುಗ್ಗಿದ್ದಾರೆ. ಬಾಗಿಲಿಗೆ ಬೀಗ ಹಾಕಿದ್ದರಿಂದ ಕಿಟಕಿಯ ಮೂಲಕ ನಮಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ನನ್ನ ತಂಗಿ ಮತ್ತು ಅಜ್ಜಿಯನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಲು ನನಗೆ ಬೆದರಿಕೆ ಹಾಕಿದ್ದಲ್ಲದೇ ಒಂದು ವೇಳೆ ನಟಿಸಿದರೆ, ಯಾವುದೇ ಹಂತಕ್ಕೆ ಹೋಗುತ್ತೇನೆ ಎಂದು ಕೂಗಾಡಿದ್ದಾರೆ. ಅವರ ಆಯ್ಕೆಯ ಚಿತ್ರಗಳಲ್ಲಿ ಮಾತ್ರ ನಟಿಸಬೇಕು ಎಂದು ಹೇಳಿದ್ದಾರೆʼʼ ಎಂದು ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ ನಟಿ.
ಇದನ್ನೂ ಓದಿ: Actor Mammootty: ಮಾಲಿವುಡ್ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ
ನಟಿಯ ಪೋಸ್ಟ್
ಅಷ್ಟೇ ಅಲ್ಲದೇ ʻʻಕಿಟಕಿಯನ್ನು ಜೋರಾಗಿ ಬಡಿದು ಜೀವನಕ್ಕಾಗಿ ನನ್ನ ಅಜ್ಜಿ ನನ್ನನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಈಗಷ್ಟೇ ಶೂಟಿಂಗ್ ಮುಗಿಸಿರುವ ನನ್ನ ಮಲಯಾಳಂ ಸಿನಿಮಾದ ತಂಡವನ್ನೂ ಅವರು ಕೆಟ್ಟದಾಗಿ ನಿಂದಿಸಿದ್ದಾರೆʼʼಎಂದು ಅರ್ಥನಾ ಬಿನು ಬರೆದುಕೊಂಡಿದ್ದಾರೆ.