Site icon Vistara News

Article 370: ಬಾಲಿವುಡ್‌ ಚಿತ್ರವನ್ನು ಹಾಡಿ ಹೊಗಳಿದ ಮೋದಿ; ಯಾವ ಸಿನಿಮಾ? ಏನಿದರ ವೈಶಿಷ್ಟ್ಯ?

modi yami

modi yami

ಮುಂಬೈ: ಬಾಲಿವುಡ್‌ ಚಿತ್ರ ʼಆರ್ಟಿಕಲ್‌ 370ʼ (Article 370) ಕುತೂಹಲ ಕೆರಳಿದೆ. ಫೆಬ್ರವರಿ 23ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ನಿರೀಕ್ಷೆ ಮೂಡಿಸಿದೆ. ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಆದಿತ್ಯ ಸುಹಾಸ್‌ ಜಂಬಳೆ (Aditya Suhas Jambhale) ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಹೊಂದಿದೆ. ಯಾಮಿ ಗೌತಮ್‌ (Yami Gautam), ಕನ್ನಡತಿ ಪ್ರಿಯಾಮಣಿ (Priyamani) ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸುವ ಈ ಚಿತ್ರದ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಜಮ್ಮುವಿನಲ್ಲಿ ಪ್ರಸ್ತಾವಿಸಿ, ಮೆಚ್ಚುಗೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯಾಮಿ ಗೌತಮ್‌ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.

ಮೋದಿ ಹೇಳಿದ್ದೇನು?

ಇತ್ತೀಚೆಗೆ ಜಮ್ಮುವಿಗೆ ಭೇಟಿ ನೀಡಿದ್ದ ಮೋದಿ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ʼಆರ್ಟಿಕಲ್‌ 370ʼ ಚಿತ್ರವನ್ನು ಉಲ್ಲೇಖಿಸಿದ್ದಾರೆ. ಈ ಸಿನಿಮಾ ಮೂಲಕ ಆರ್ಟಿಕಲ್‌ 370 ಬಗ್ಗೆ ಸರಿಯಾದ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ. ʼʼಈ ವಾರ ʼಆರ್ಟಿಕಲ್‌ 370ʼ ಚಿತ್ರ ಬಿಡುಗಡೆಯಾಗಲಿದೆ ಎನ್ನುವುದು ತಿಳಿದು ಬಂತು. ಸಮರ್ಪಕ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಈ ಸಿನಿಮಾ ನೆರವಾಗಲಿದೆʼʼ ಎಂದು ಅವರು ಹೇಳಿದ್ದಾರೆ.

ಧನ್ಯವಾದ ತಿಳಿಸಿದ ಯಾಮಿ ಗೌತಮ್‌

ಈ ಬಗ್ಗೆ ಪ್ರತಿಕ್ರಿಯಿಸಿದ ಯಾಮಿ ಗೌತಮ್‌ ಅವರು, ʼʼಆರ್ಟಿಕಲ್‌ 370ʼ ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಿಸಿದ್ದು ರೋಮಾಂಚನ ತಂದಿದೆ. ಈ ನೈಜ ಕಥೆಯನ್ನು ನಿಮ್ಮ ನಿರೀಕ್ಷೆಗೆ ತಕ್ಕಂತೆ ತೆರೆ ಮೇಲೆ ಮೂಡಿಸುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡುತ್ತಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.

‘ಆರ್ಟಿಕಲ್ 360’ ಯಾಮಿ ಗೌತಮ್ ಅವರ ವೃತ್ತಿ ಜೀವನದ ಮಹತ್ವದ ಚಿತ್ರ ಎಂದೇ ಪರಿಗಣಿಸಲಾಗಿದೆ. ದೇಶವನ್ನು ಬಾಹ್ಯ ಬೆದರಿಕೆಯಿಂದ ರಕ್ಷಿಸುವ ಗುಪ್ತಚರ ಅಧಿಕಾರಿ ಝೂನಿ ಹಕ್ಸರ್ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ನೈಜ ಘಟನೆಗಳ ಹಿನ್ನೆಲೆಯಲ್ಲಿ ಈ ಚಿತ್ರವು ರಾಜಕೀಯ, ರಾಷ್ಟ್ರೀಯ ಭದ್ರತಾ ವಿಷಯಗಳತ್ತ ಬೆಳಕು ಚೆಲ್ಲಲಿದೆ. ಜತೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ, ಭ್ರಷ್ಟಾಚಾರವನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ವಿಶೇಷ ಎಂದರೆ ಯಾಮಿ ಗೌತಮ್‌ ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಮಿಂಚಿದ್ದಾರೆ. ಕನ್ನಡತಿ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ ಟ್ರೈಲರ್‌ ಗಮನ ಸೆಳೆದಿದ್ದು, ನಿರೀಕ್ಷೆ ಹೆಚ್ಚಿಸದೆ.

ಇದನ್ನೂ ಓದಿ: Yami Gautam: ʻಯಾಮಿ ಗೌತಮ್ʼ ಪ್ರೆಗ್ನೆಂಟ್; ಪ್ರೆಸ್‌ಮೀಟ್‌ನಲ್ಲಿ ದಿಂಬು ಕೊಟ್ಟ ಪತಿ, ಹಾಡಿ ಹೊಗಳಿದ ಫ್ಯಾನ್ಸ್‌!

ಟ್ರೈಲರ್‌ನಲ್ಲಿ ಮಿಂಚು ಹರಿಸಿದ ಮೋದಿ, ಅಮಿತ್‌ ಶಾ

ಸುಮಾರು 3 ನಿಮಿಷದ ಟ್ರೈಲರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರ ಕೂಡ ಕಂಡು ಬಂದಿದೆ. ಕಾಶ್ಮೀರ ಭಯೋತ್ಪಾದನೆ, ಸೇನಾಧಿಕಾರಿಗಳ ಹೋರಾಟ, ಆರ್ಟಿಕಲ್ 370 ತೆಗೆದರೆ ಏನೆಲ್ಲ ಆಗಲಿದೆ ಎನ್ನುವ ಚರ್ಚೆ, ಭಯೋತ್ಪಾದಕರ ಕುತಂತ್ರ ಹೀಗೆ ಸಾಕಷ್ಟು ವಿಷಯಗಳನ್ನು ಒಳಗೊಂಡ ಟ್ರೈಲರ್‌ನಲ್ಲಿ ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ಗಮನ ಸೆಳೆದಿತ್ತು. ಚಿತ್ರ ಯಾವ ರೀತಿ ಮೋಡಿ ಮಾಡಲಿದೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version