ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ “ಗಂಧದಗುಡಿ’ ಚಿತ್ರದ ಬಳಿಕ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಹೊಸ ಸಿನಿಮಾ “ಆಚಾರ್ ಆ್ಯಂಡ್ ಕೋ (Achar And Co Movie). ಇದೀಗ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ಸಕ್ಸೆಸ್ ಮೀಟ್ ಮಾಡಿ ಸುದ್ದಿಗೋಷ್ಠಿ ಹಮ್ಮಿಕೊಂಡಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರತಂಡದ ಜತೆ ಕೂತು ಚಿತ್ರದ ಸಕ್ಸೆಸ್ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಸದಾಶಿವನಗರದ ಅಪ್ಪು ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ ʻನಾನು ಈ ಚಿತ್ರದ 6 ನಿಮಿಷದ ಶೋ ರೀಲ್ ನೋಡಿದಾಲೇ ತುಂಬಾ ಇಷ್ಟ ಆಗಿತ್ತು. ʻಆಚಾರ್ ಆ್ಯಂಡ್ ಕೋ’ ಸಿನಿಮಾ ಮಾಡಲೇಬೇಕು ಎಂದು ನಾನು ಮತ್ತು ಅಪ್ಪು ಅವರು ಇಬ್ಬರೂ ನಿರ್ಧಾರ ಮಾಡಿದ್ದೇವು. ಇದೀಗ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಚಿತ್ರ ನೋಡುವರ ಸಂಖ್ಯೆ ಜಾಸ್ತಿ ಆಗುತ್ತಿದೆ. ನಮ್ಮ ಚಿತ್ರ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಮ್ಮ ಕಾದಂಬರಿಗಳನ್ನು ಓದುವುದಕ್ಕೆ ಹೇಳುತ್ತಿದ್ದರು. ಅದೇ ರೀತಿ ನಾನು ಈಗ ಪುಸ್ತಕ ಓದುತ್ತಿದ್ದೇನೆ, ಸಿನಿಮಾ ಕೂಡ ನೋಡುತ್ತಿದ್ದೇನೆ. ಅಪ್ಪು ಪ್ರೊಡಕ್ಷನ್ ವಿಚಾರದಲ್ಲಿ ಸ್ವಲ್ಪ ಫ್ರೀ ಇದ್ದರು. ಆದರೆ ಪಾರ್ವತಮ್ಮ ಅವರು ಬಜೆಟ್ ಕಡೆ ಗಮನ ಕೊಡುತ್ತಿದ್ದರು. ನಾನು ಇಬ್ಬರನ್ನು ಫಾಲೋ ಮಾಡಿ ನನ್ನ ಎಫರ್ಟ್ ಹಾಕಿ ಸಿನಿಮಾ ಮಾಡುತ್ತಿದ್ದೇನೆʼʼಎಂದರು.
ಯುವರಾಜ್ ಕುಮಾರ್ ಅವರನ್ನು ಪಿಆರ್ ಕೆ ಬ್ಯಾನರ್‌ನಲ್ಲಿ ಲಾಂಚ್ ಮಾಡುವ ಕನಸು ಅಪ್ಪು ಅವರಿಗಿತ್ತು ಎಂಬ ಪ್ರಶ್ನೆಗೆ ಅಶ್ವಿನಿ ಪುನೀತ್ ಮಾತನಾಡಿ ʻʻಖಂಡಿತ ಮುಂದಿನ ದಿನಗಳಲ್ಲಿ ಯುವ ಜತೆ ಸಿನಿಮಾ ಮಾಡುತ್ತೇನೆ. ಆದರೆ ಯುವರಾಜ್ ಡೇಟ್ ಕೊಡಬೇಕುʼʼ ಎಂದು ನಕ್ಕು ಉತ್ತರ ಕೊಟ್ಟರು.
ಇದನ್ನೂ ಓದಿ: Ashwini Puneeth Rajkumar: ಈ ವಾರ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ʻಆಚಾರ್ ಆ್ಯಂಡ್ ಕೋʼ ಸಿನಿಮಾ ತೆರೆಗೆ!
ಈ ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು ನಿರ್ದೇಶಿಸುವುದರ ಜತೆಗೆ ಸಿಂಧು ಅವರೇ ನಾಯಕಿಯಾಗಿಯೂ ನಟಿಸಿದ್ದಾರೆ .‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಆಚಾರ್ ಆ್ಯಂಡ್ ಕೋ’ (Achar & Co) ಸಿನಿಮಾ ಜುಲೈ 28ರಂದು ತೆರೆ ಕಂಡಿದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇದೆ. ಹಲವು ಹಿರಿಯ-ಕಿರಿಯ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ. 1960ರ ಕಾಲಟ್ಟದಲ್ಲಿ ನಡೆಯುವ ಕಥೆ. ವಸ್ತ್ರವಿನ್ಯಾಸ ಮತ್ತು ಕಲಾನಿರ್ದೇಶನದ ಮೂಲಕ 60 ಹಾಗೂ 70ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಮರುಸೃಷ್ಟಿ ಮಾಡಲಾಗಿದೆ.
ಈ ಚಿತ್ರದ ಬಹುತೇಕ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು ಮತ್ತೊಂದು ವಿಶೇಷ. ಅಶ್ವಿನಿ ಪುನೀತ್ ನಿರ್ಮಾಣ, ಸಿಂಧು ನಿರ್ದೇಶನ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಹೇಮಾ ಸುವರ್ಣ ಸೌಂಡ್ ಎಂಜಿನಿಯರ್, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ ಸೇರಿ ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ. ಜತೆಗೆ ವಿಶ್ವಾಸ್ ಕಶ್ಯಪ್ ಕಲಾನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಚಿತ್ರಕ್ಕಿದೆ.