ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ಸಿನಿಮಾ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಸೋಮವಾರ ದಾಂಪತ್ಯ ಜೀವನಕ್ಕೆ (Athiya-KL Rahul Wedding) ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಸುನಿಲ್ ಅವರ ಮಾಲೀಕತ್ವದಲ್ಲಿರುವ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಈ ಜೋಡಿ ಮದುವೆಯಲ್ಲಿ ತೊಟ್ಟಿದ್ದಂತಹ ಉಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ವಿಶೇಷ ಉಡುಗೆಯ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Athiya Kl Rahul Wedding Reception: ಐಪಿಎಲ್ ಬಳಿಕ ರಾಹುಲ್-ಅಥಿಯಾ ಜೋಡಿಯ ಆರತಕ್ಷತೆ; ಸುಳಿವು ನೀಡಿದ ಸುನೀಲ್ ಶೆಟ್ಟಿ
ಅಥಿಯಾ ಅವರು ತೊಟ್ಟಂತಹ ಲೆಹೆಂಗಾವನ್ನು ಪ್ರಸಿದ್ಧ ವಸ್ತ್ರ ವಿನ್ಯಾಸಕರಾಗಿರುವ ಅನಾಮಿಕ ಖನ್ನಾ ವಿನ್ಯಾಸ ಮಾಡಿದ್ದಾರೆ. ಭಾರೀ ಎಂಬ್ರಾಯಿಡರಿ ಇರುವ ಈ ಲೆಹೆಂಗಾ ತಯಾರಿಸುವುದಕ್ಕೆ ಬರೋಬ್ಬರಿ 10,000 ಗಂಟೆಗಳು ಅಂದರೆ ಒಂದು ವರ್ಷ ಮತ್ತು 50 ದಿನಗಳು ತಗುಲಿವೆಯಂತೆ. ಈ ವಿಚಾರವನ್ನು ಅನಾಮಿಕ ಅವರೇ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಿಳಿ ಗುಲಾಬಿ ಬಣ್ಣದ್ದಾಗಿರುವ ಲೆಹೆಂಗಾ ಅನಾಮಿಕ ಖನ್ನಾ ಅವರ ವಿಶೇಷ ಚಿಕನ್‌ಕಾರಿ ಲೆಹೆಂಗಾವಾಗಿದೆ. ರೇಶ್ಮೆ ಬಟ್ಟೆಯ ಮೇಲೆ ಜರ್ದೋಜಿ ಮತ್ತು ಜಾಲಿ ವರ್ಕ್ ಮಾಡಲಾಗಿದೆ. ಸಂಪೂರ್ಣವಾಗಿ ಕೈಯಿಂದಲೇ ನೇಯ್ದ ಬಟ್ಟೆಯನ್ನೇ ಲೆಹೆಂಗಾಕ್ಕೆ ಬಳಕೆ ಮಾಡಲಾಗಿದೆ. ಹಾಗೆಯೇ ರೇಶ್ಮೆ ಆರ್ಗನ್ಜಾದಿಂದ ಮಾಡಿದ ದುಪಟ್ಟಾವನ್ನು ಧರಿಸಿದ್ದರು.
ಈ ಲೆಹೆಂಗಾ ಧರಿಸುವುದಕ್ಕೆ ಅನಾಮಿಕ ಅವರಿಗೆ ಅಥಿಯಾ ಅವರೇ ಸ್ಫೂರ್ತಿಯಂತೆ. “ಅಥಿಯಾ ಅತ್ಯಂತ ಒಳ್ಳೆಯ ಅಭಿರುಚಿ ಇರುವಂತವರು. ಅವರ ಮದುವೆಗೆ ವಿಶೇಷವಾದ ಉಡುಗೆಯನ್ನೇ ತಯಾರಿಸಬೇಕೆಂದು ನಾನು ಬಯಸಿದ್ದೆ. ಅವರದ್ದು ಅತ್ಯಂತ ಶಕ್ತಿಯುತ ವ್ಯಕ್ತಿತ್ವ. ಈ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ನಾನು ಈ ಲೆಹೆಂಗಾವನ್ನು ವಿನ್ಯಾಸ ಮಾಡಿದೆ. ಇದನ್ನು ಎಷ್ಟು ವರ್ಷ ಬಿಟ್ಟು ನೋಡಿದರೂ ಅವರಿಗೆ ಬೇಸರವೆನಿಸುವುದಿಲ್ಲ” ಎಂದು ಹೇಳಿದ್ದಾರೆ ಅನಾಮಿಕ.
ಇದನ್ನೂ ಓದಿ: Athiya Shetty KL Rahul wedding: ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ವಿವಾಹದ ಸುಂದರ ಫೋಟೊಗಳು ಇಲ್ಲಿವೆ
ಅಥಿಯಾ ಲೆಹೆಂಗಾಕ್ಕೆ ಸರಿಹೊಂದುವಂತಹ ದೊಡ್ಡ ನೆಕ್ಲೇಸ್, ಓಲೆ, ಬೈತಲೆ ಬೊಟ್ಟು ಮತ್ತು ಬಳೆಗಳನ್ನು ಧರಿಸಿದ್ದರು. ಅಥಿಯಾ ಉಡುಗೆಗೆ ಸರಿಹೊಂದುವಂತೆ ರಾಹುಲ್ ಕೂಡ ತಿಳಿ ಗುಲಾಬಿ ಬಣ್ಣದ ಶರ್ವಾನಿಯನ್ನು ಧರಿಸಿದ್ದರು.