ಬೆಂಗಳೂರು: ‘ಅವತಾರ್’ ಪದದಲ್ಲೇ ಪವರ್ ಇದೆ, ಒಂದು ಗತ್ತಿದೆ. ಜಗತ್ತು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಗುಡುಗಿದ್ದ ಸಿನಿಮಾ 13 ವರ್ಷಗಳ ನಂತರವೂ ಅದೇ ಖದರ್ ತೋರಿಸಿದೆ. ಅಂದಹಾಗೆ 13 ವರ್ಷಗಳ ಬಳಿಕ ರೀ ರಿಲೀಸ್ ಆಗಿರುವ ಅವತಾರ್-1 (Avatar Box Office) ಒಂದೇ ವಾರದಲ್ಲಿ ಸುಮಾರು 50 ಮಿಲಿಯನ್ ಡಾಲರ್ ಗಳಿಸಿದೆ. ಇದೇ ಮೊತ್ತವನ್ನು ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು ₹400 ಕೋಟಿಗೂ ಹೆಚ್ಚು ದುಡಿದಿದೆ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಸಿನಿಮಾ. ಈ ಮೂಲಕ ₹500 ಕೋಟಿ ಕಡೆಗೂ ಹೆಜ್ಜೆ ಹಾಕಿದೆ ‘ಅವತಾರ್-1’.
ಯಾವುದೇ ಹಳೆಯ ಸಿನಿಮಾ ಒಂದು ರೀ ರಿಲೀಸ್ ಆಗಿ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿರುವುದು ಇದೇ ಮೊದಲು. 13 ವರ್ಷದ ಹಿಂದೆ 2.9 ಬಿಲಿಯನ್ ಡಾಲರ್ ಹಣ ಗಳಿಸಿತ್ತು ‘ಅವತಾರ್-1’. ಈ ಮೂಲಕ 100 ಮಿಲಿಯನ್ ಡಾಲರ್ ಅಂತರದಲ್ಲಿ 3 ಬಿಲಿಯನ್ ಡಾಲರ್ ಗಡಿ ದಾಟುವ ಅವಕಾಶ ಮಿಸ್ ಮಾಡಿಕೊಂಡಿತ್ತು. ಆದರೆ ಈಗ ಆ ಕನಸೂ ನನಸಾಗುವ ಸಮಯ ಬಂದಿದೆ ಎನ್ನುತ್ತಿದ್ದಾರೆ ‘ಅವತಾರ್’ ಫ್ಯಾನ್ಸ್.
ಬಾಕ್ಸ್ ಆಫೀಸ್ ಶೇಕ್
ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದಲ್ಲಿ ನಂ.1 ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಅವತಾರ್-1’ ಚಿತ್ರ ಮತ್ತೆ ಸದ್ದುಮಾಡಿದೆ. ಇನ್ನೇನು ‘ಅವತಾರ್-2’ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿರುವ ಹೊತ್ತಿನಲ್ಲೇ ಸಂಚಲನ ಸೃಷ್ಟಿಯಾಗಿದೆ. ‘ಅವತಾರ್’ ಟೈಟಲ್ ಕೇಳಿದರೆ ಸಾಕು ಬಾಕ್ಸ್ ಆಫೀಸ್ ನಡುಗುತ್ತದೆ ಎಂಬ ಮಾತನ್ನು ರೀ ರಿಲೀಸ್ ಆಗಿರುವ ಮೊದಲ ವಾರವೇ ನಿಜಮಾಡಿದೆ ಅವತಾರ್-1. ಹೀಗೆ ಡಿಸೆಂಬರ್ 16ಕ್ಕೆ ‘ಅವತಾರ್’ ಪಾರ್ಟ್-2 ರಿಲೀಸ್ ಆಗಲಿರುವ ಹೊತ್ತಲ್ಲೇ ಹೊಸ ಹವಾ ಎಬ್ಬಿಸಿದ್ದಾರೆ ಜೇಮ್ಸ್ ಕ್ಯಾಮೆರಾನ್.
ಭರ್ಜರಿ ಪ್ಲ್ಯಾನ್..!
ಹತ್ತಿರ ಹತ್ತಿರ ಒಂದೂವರೆ ದಶಕದ ಬಳಿಕ ಅವತಾರ್ ಚಿತ್ರ ಸೀಕ್ವೆಲ್ ಮೂಲಕ ಬರುತ್ತಿದೆ. ಹೀಗಾಗಿ ಬಹುತೇಕರಿಗೆ ‘ಅವತಾರ್-1’ನ ಪಾತ್ರ ಪರಿಚಯ ಮರೆತು ಹೋಗಿರುತ್ತೆ. ಇದು ‘ಅವತಾರ್-2’ ನೋಡುವಾಗ ಗೊಂದಲ ಸೃಷ್ಟಿಸುತ್ತದೆ. ಇದೇ ಕಾರಣದಿಂದ ಅವತಾರ್ ಟೀಂ ‘ಅವತಾರ್-1’ನ್ನು ಈಗ ಜಗತ್ತಿನಾದ್ಯಂತ ರೀ ರಿಲೀಸ್ ಮಾಡಿದೆ. ಭಾರತದಲ್ಲಿ ಸೆಪ್ಟೆಂಬರ್ 23ರ ಶುಕ್ರವಾರ ‘ಅವತಾರ್-1’ ರೀ ರಿಲೀಸ್ ಆಗಿತ್ತು. ಈ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರೂ ‘ಅವತಾರ್-2’ ನೋಡಲು ಜೇಮ್ಸ್ ಕ್ಯಾಮೆರಾನ್ ಪ್ಲ್ಯಾನ್ ಮಾಡಿದ್ದರು. ಇದೀಗ ಕ್ಯಾಮೆರಾನ್ ಐಡಿಯಾ ಭರ್ಜರಿ ಸಕ್ಸಸ್ ಕಂಡಿದೆ. ರೀ ರಿಲೀಸ್ ಆದ 1 ವಾರದಲ್ಲಿ 50 ಮಿಲಿಯನ್ ಡಾಲರ್ ಗಳಿಸಿದೆ ಈ ಸಿನಿಮಾ.
ಸಾವಿರಾರು ಸ್ಕ್ರೀನ್..!
‘ಅವತಾರ್’ ಹೆಸರಲ್ಲೇ ಗತ್ತಿದೆ, ‘ಅವತಾರ್’ ಟೈಟಲ್ನಲ್ಲೇ ಸೆಳೆತವಿದೆ. ಹೀಗಿರುವಾಗ ‘ಅವತಾರ್-1’ ರೀ ರಿಲೀಸ್ ಆಗುತ್ತೆ ಅಂದ್ರೆ ಸಣ್ಣ ವಿಚಾರ ಅಲ್ಲ. ಸಾವಿರಾರು ಸ್ಕ್ರೀನ್ಗಳಲ್ಲಿ ಅವತಾರ್-1 ರೀ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಚಿತ್ರದಲ್ಲಿ ಗ್ರಾಫಿಕ್ಸ್ ಸೇರಿ ಹಲವು ವಿಭಾಗದಲ್ಲಿ ಬದಲಾವಣೆ ಮಾಡಲಾಗಿತ್ತು. ‘ಅವತಾರ್-1’ ರೀ ರಿಲೀಸ್ಗೆ ₹80 ಕೋಟಿ ಖರ್ಚು ಮಾಡಲಾಗಿತ್ತು. ಈಗಾಗಲೇ ಖರ್ಚು ಮಾಡಿದ 5 ಪಟ್ಟು ಹಣ ವಾಪಸ್ ಬಂದಿದೆ.
ಒಟ್ಟಾರೆ ಹೇಳುವುದಾದರೆ ಕೊರೊನಾ ಕಂಟಕ ದೂರವಾದ ನಂತರ ಜಗತ್ತಿನಾದ್ಯಂತ ಚಿತ್ರರಂಗ ಮತ್ತೊಮ್ಮೆ ಮೈಕೊಡವಿ ನಿಂತಿದೆ. ಅದರ ಭಾಗವಾಗಿ ಸಾಲು ಸಾಲು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ‘ಅವತಾರ್-2’ ಕೂಡ ನಿಂತಿದೆ. ‘ಅವತಾರ್-2’ ಬಿಡುಗಡೆಗೂ ಮೊದಲು ಸೂಪರ್ ಸರ್ಪ್ರೈಸ್ ಕೊಟ್ಟಿರುವ ಜೇಮ್ಸ್ ಕ್ಯಾಮೆರಾನ್ ಮತ್ತೆ ಇತಿಹಾಸ ಸೃಷ್ಟಿಸುವ ಲೆಕ್ಕಾಚಾರ ಹಾಕಿದ್ದಾರೆ.
ಇದನ್ನೂ ಓದಿ: Avatar Re Release | ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್ -1’