Site icon Vistara News

Bade Miyan Chote Miyan: ಈದ್ ಹಬ್ಬಕ್ಕೆ ‘ಬಡೆ ಮಿಯಾ ಚೋಟೆ ಮಿಯಾ’ ತೆರೆಗೆ; ಅಕ್ಷಯ್ ಕುಮಾರ್‌ ಚಿತ್ರ ನಾಳೆ ರಿಲೀಸ್‌

Bade Miyan Chote Miyan

Bade Miyan Chote Miyan

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರಗಳ ಪೈಕಿ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಕೂಡ ಒಂದು. ಸೆಟ್ಟೇರಿದಾಗಿನಿಂದ ಕುತೂಹಲ ಮೂಡಿಸಿದ್ದ ಈ ಸಿನಿಮಾದ ಟ್ರೈಲರ್‌ ಇತ್ತೀಚೆಗೆ ಹೊರ ಬಂದು ನಿರೀಕ್ಷೆ ಹೆಚ್ಚಿಸಿದೆ. ಅಕ್ಷಯ್ ಕುಮಾರ್ (Akshay Kumar), ಟೈಗರ್‌ ಶ್ರಾಫ್ (Tiger Shroff) ಮತ್ತು ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಮೊದಲ ಬಾರಿಗೆ ಒಂದಾಗಿದ್ದು, ಇವರ ಕಾಂಬಿನೇಷನ್‌ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಈದ್‌ ಹಬ್ಬದ ಪ್ರಯುಕ್ತ ಈ ಚಿತ್ರ ನಾಳೆ (ಏಪ್ರಿಲ್‌ 11) ಬಿಡುಗಡೆಯಾಗಲಿದೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್‌‌‌ ಖಳನಾಯಕನಾಗಿ ಅಬ್ಬರಿಸಿದ್ದಾರೆ. 2017ರಲ್ಲಿ ತೆರೆಕಂಡ ʼನಾಮ್‌ ಶಬ್ನಾʼ ಚಿತ್ರದ ಬಳಿಕ ಪೃಥ್ವಿರಾಜ್‌ ಬಾಲಿವುಡ್‌ ಮರಳಿದ್ದು ಕೂಡ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ಅವರ ʼಆಡು ಜೀವಿತಂʼ ಸಿನಿಮಾ ಉತ್ತಮ ಪ್ರದರ್ಶನ ತೋರುತ್ತಿದೆ. ಹೀಗಾಗಿ ಈ ಚಿತ್ರದ ಮೇಲೂ ನಿರೀಕ್ಷೆ ಮೂಡಿದೆ. ಇನ್ನು ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್. ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್‌ಗೆ ಬಿಗ್ ಬಜೆಟ್‌ನಲ್ಲಿ ‘ಬಡೇ ಮಿಯಾ ಚೋಟೆ ಮಿಯಾ’ ಅನ್ನು ನಿರ್ಮಿಸಲಾಗಿದೆ. ಸಲ್ಮಾನ್‌ ಖಾನ್‌ ಅವರ ʼಟೈಗರ್ ಜಿಂದಾ ಹೈʼ, ʼಸುಲ್ತಾನ್ʼ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ I ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೈನ್‌ಮೆಂಟ್‌ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸಲಾಗುತ್ತಿದೆ. ಹಿಂದಿ ಜತೆಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Ajay Devgn:‌ ಕನ್ನಡಿಗನ ಕಥೆ ಕದ್ದರಾ ಅಜಯ್‌ ದೇವಗನ್‌? ‘ಮೈದಾನ್’ ಚಿತ್ರಕ್ಕೆ ಕೋರ್ಟ್ ತಡೆ!

ಹಲವು ವಿಶೇಷತೆಗಳ ಸಿನಿಮಾ

ಇನ್ನು ಈ ಸಿನೆಮಾ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಾಲಿವುಡ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌ ಮತ್ತು ಟೈಗರ್‌ ಶ್ರಾಫ್‌ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಕ್ಷಯ್‌ ಕುಮಾರ್‌ ಜತೆ ʼಸಾಮ್ರಾಟ್‌ ಪೃಥ್ವಿರಾಜ್‌ʼ ಸಿನಿಮಾದಲ್ಲಿ ನಟಿಸಿದ್ದ ಮಾನುಷಿ ಚಿಲ್ಲರ್‌ ಮತ್ತೆ ಇಲ್ಲಿ ಒಂದಾಗಿದ್ದಾರೆ. ʼಒನ್ಸ್‌ ಅಪೋನ್‌ ಎ ಟೈಮ್‌ ಇನ್ ಮುಂಬೈ‌ʼ, ʼಜೋಕರ್‌ʼ, ʼರೌಡಿ ರಾಥೋಡ್‌ʼ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದ ಅಕ್ಷಯ್‌ ಕುಮಾರ್‌ ಮತ್ತು ಸೋನಾಕ್ಷಿ ಸಿನ್ಹಾ ಹಲವು ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅಲಯಾ ಎಫ್. ಅವರಿಗೆ ಸಿಕ್ಕ ಬಹು ದೊಡ್ಡ ಬಜೆಟ್‌ ಸಿನಿಮಾ ಇದು. ಈ ಎಲ್ಲ ಕಾರಣಗಳಿಂದ ‘ಬಡೇ ಮಿಯಾ ಚೋಟೆ ಮಿಯಾ’ ನಿರೀಕ್ಷೆ ಹೆಚ್ಚಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version