ಮುಂಬೈ: ಬಿಗ್ ಬಜೆಟ್ ಸಿನಿಮಾಗಳ ಕಾಲವಿದು. ಆ ರೀತಿಯಲ್ಲಿ ಹೆಚ್ಚು ಹಣ ಸುರಿದು ಸಿನಿಮಾ ಮಾಡಿದರೆ ಅದು ದೊಡ್ಡ ಹಿಟ್ ಆಗಿಬಿಡುತ್ತದೆ ಎನ್ನುವ ಕಲ್ಪನೆಯೊಂದು ಜನರ ತಲೆಯಲ್ಲಿ ಮೂಡಿಬಿಟ್ಟಿದೆ. ಆದರೆ ಕಡಿಮೆ ಖರ್ಚನ್ನು ಮಾಡಿದರೂ ಕಂಟೆಂಟ್ ಮೂಲಕವೇ ಪ್ರೇಕ್ಷಕರ ಮನ ಗೆದ್ದು ಹಣ ಗಳಿಸಬಹುದು ಎಂದು ಆಗಾಗ ಕೆಲ ಸಿನಿಮಾಗಳು ತೋರಿಸಿಕೊಡುತ್ತಿರುತ್ತವೆ. ಅದರ ಸಾಲಿಗೆ ಇದೀಗ ಮರಾಠಿಯ ಬಾಯಿಪಣ್ ಭಾರಿ ದೇವಾ (Baipan Bhaari Deva)ಸಿನಿಮಾ ಸೇರಿಕೊಂಡಿದೆ.
ಜಿಯೋ ಸ್ಟುಡಿಯೋಸ್‌ನ ಬೈಪನ್ ಭಾರಿ ದೇವ ಸಿನಿಮಾ ಜೂನ್ 30ರಂದು ಬಿಡುಗಡೆಯಾಗಿದೆ. ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ 11 ದಿನಗಳಲ್ಲಿ ಒಟ್ಟು 34.2 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಬಿಡುಗಡೆಯಾದ ಮೊದಲನೇ ವಾರ 11.30 ಕೋಟಿ ರೂ. ಗಳಿಸಿಕೊಂಡರೆ ಎರಡನೇ ವಾರದಲ್ಲಿ 13.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಲವಾರು ಬಿಗ್ ಬಜೆಟ್ ಸಿನಿಮಾಗಳು ಪ್ರದರ್ಶನದಲ್ಲಿದ್ದರೂ ಈ ಸಿನಿಮಾ ಮಾತ್ರ ಎಲ್ಲ ಸಿನಿಮಾಗಳಿಗೆ ಒಳ್ಳೆಯ ಸ್ಪರ್ಧೆ ನೀಡುತ್ತಾ ಹಿಟ್ ಆಗಿದೆ.
ಇದನ್ನೂ ಓದಿ: Viral Video: ಅಬ್ಬಾ ಮಳೆಯೇ; ಮನಾಲಿಯಲ್ಲಿ 4 ಅಂತಸ್ತಿನ ಹೋಟೆಲನ್ನು ಅರೆಕ್ಷಣದಲ್ಲಿ ನುಂಗಿದ ಪ್ರವಾಹ!
ಈ ಸಿನಿಮಾ ಒಂದೇ ದಿನದಲ್ಲಿ 6.05 ಕೋಟಿ ರೂ. ಗಳಿಸಿದೆ. ಆ ಮೂಲಕ ಮರಾಠಿ ಭಾಷೆಯಲ್ಲೇ ಒಂದೇ ದಿನದಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿದ ಸಿನಿಮಾ ಎನ್ನುವ ದಾಖಲೆಯನ್ನೂ ನಿರ್ಮಿಸಿಕೊಂಡಿದೆ. ದೇಶದಲ್ಲಿ ಈ ಸಿನಿಮಾದ ಗಳಿಕೆ 28.98 ಕೋಟಿ ರೂ. ಇದೆ. ಜಾಗತಿಕವಾಗಿ ಇದು 34.2 ಕೋಟಿ ರೂ. ಆಗಿದೆ.
ಬಾಯಿಪಣ್ ಭಾರಿ ದೇವಾ ಸಿನಿಮಾವನ್ನು ಕೇದಾರ್ ಶಿಂಧೆ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರೋಹಿಣಿ ಹಟ್ಟಂಗಡಿ, ವಂದನಾ ಗುಪ್ತೆ, ಸುಕನ್ಯಾ ಮಾನೆ, ಶಿಲ್ಪಾ ನಾವಳ್ಕರ್, ಸುಚಿತ್ರಾ ಬಾಂದೇಕರ್ ಮತ್ತು ದೀಪಾ ಪರಬ್ ನಟಿಸಿದ್ದಾರೆ. ಕೆಲವು ಕಾರಣಗಳಿಂದ ಬೇರ್ಪಟ್ಟು ಕುಟುಂಬ, ವೈಯಕ್ತಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಆರು ಸಹೋದರಿಯರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಮಹಿಳೆಯರಿಗಂತೂ ಈ ಸಿನಿಮಾ ಭಾವನಾತ್ಮಕವಾಗಿ ಇಷ್ಟವಾಗಿರುವುದಾಗಿ ಹೇಳಲಾಗಿದೆ.