ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್ ಕನ್ನಡ ಸೀಸನ್ 10 (BBK Season 10) ಅದ್ಧೂರಿಯಾಗಿ ಆರಂಭವಾಗಿದೆ. ಬಹಳಷ್ಟು ಬದಲಾವಣೆಯೊಂದಿಗೆ ಆರಂಭವಾದ ಈ ಶೋ ಗಮನ ಸೆಳೆಯುತ್ತಿದೆ. ವೋಟಿಂಗ್ ಮೂಲಕ ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ಸೋಮವಾರ ಅಚ್ಚರಿ ಎಂಬಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಭೇಟಿ ನೀಡಿದರು.
ಸ್ಪಷ್ಟನೆ ನೀಡಿದ ಬಿಗ್‌ಬಾಸ್
ಆರಂಭದಲ್ಲಿ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ ಎಂದು ಉಳಿದವರು ಭಾವಿಸಿದ್ದರು. ಹಲವು ದಿನಗಳ ಕಾಲ ಅವರು ಅಲ್ಲಿಯೇ ಉಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಕುರಿತು ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಜನಪ್ರತಿನಿಧಿಯಾಗಿ ರಿಯಾಲಿಟಿ ಶೋಗೆ ಹೋಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ಈ ಮಧ್ಯೆ ಬಿಗ್‌ಬಾಸ್ ಸ್ಪಷ್ಟನೆ ನೀಡಿ ಪ್ರದೀಪ್ ಈಶ್ವರ್ ಸ್ಪರ್ಧಿಯಾಗಿ ಅಲ್ಲ ಬದಲಾಗಿ ಬಿಗ್‌ಬಾಸ್ ಮನೆಗೆ ಮೊದಲ ಅತಿಥಿಯಾಗಿ ಬಂದಿದ್ದಾರೆ ಎಂದು ಹೇಳಿದ್ದರು. ಅದರಂತೆ ಇದೀಗ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಿಂದ ಈಚೆ ಬಂದಿದ್ದು, ವದಂತಿಗಳನ್ನು ತಳ್ಳಿ ಹಾಕಿ, ಟೀಕೆಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಪ್ರದೀಪ್ ಈಶ್ವರ್ ಹೇಳಿದ್ದೇನು?
ʼʼಬಿಗ್‌ಬಾಸ್ ಸ್ಪರ್ಧಾಳುಗಳಿಗೆ ಮೋಟಿವೇಷನ್ ಮಾಡಲು ಕರೆದಿದ್ದರು. ಸುಮಾರು 100 ದಿನ ಹೇಗಿರಬೇಕು ಎನ್ನುವುದನ್ನು ತಿಳಿಸಿ ಬಂದೆ. ನಾನು ಮೂಲತಃ ಶಿಕ್ಷಕ. ನನಗೆ ತಿಳಿದಿರುವುದನ್ನು ಇತರರಿಗೆ ಹೇಳಿಕೊಡುವುದು ನನ್ನ ಜವಾಬ್ದಾರಿ. ಜೀವನ ಎಂದರೇನು ಎನ್ನುವುದನ್ನು ಸ್ಪರ್ಧಿಗಳಿಗೆ ಮನವರಿಕೆ ಮಾಡಿ ಬಂದೆ. ರಿಯಾಲಿಟಿ ಶೋ ಅತಿಥಿಯಾಗಿ 3 ತಾಸು ಮಾತ್ರ ನಾನು ಒಳಹೋಗಿದ್ದೆ. ಆಯೋಜಕರ ಆಹ್ವಾನದ ಮೇರೆಗೆ ಹೋಗಿ ಬಂದಿದ್ದೇನೆ. ರಾಜ್ಯದ ಯುವಕರಿಗೆ ಅನುಕೂಲವಾಗಲಿ ಎಂದು ಭಾವಿಸಿ ಹೋಗಿದ್ದೇನೆ. ಇದನ್ನು ತಿಳಿಯದೆ ಕೆಲವರು ನನ್ನನ್ನು ಟೀಕೆ ಮಾಡುತ್ತಿದ್ದಾರೆʼʼ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಇದನ್ನೂ ಓದಿ: BBK Season 10: ಪ್ರದೀಪ್ ಈಶ್ವರ್ ಸ್ಪರ್ಧಿ ಅಲ್ಲ! ಆರಂಭದಲ್ಲೇ ಎದುರಾಯ್ತು ಭಾರಿ ಟ್ವಿಸ್ಟ್
ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿರುವುದನ್ನು ಪ್ರಶ್ನಿಸಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಜವಾಬ್ದಾರಿಯುತ ಪ್ರಜೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವುದು ಇವರ ಕರ್ತವ್ಯ. ಆದರೆ ಈ ಜವಾಬ್ದಾರಿ ಮರೆತು ಬಿಗ್‌ಬಾಸ್ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇಂತಹ ತಪ್ಪು ಮಾಡಿರುವ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ದೂರು ನೀಡಿತ್ತು. ಜತೆಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿ, “ಜಿಲ್ಲೆಯಲ್ಲಿ ಬರ ಇದ್ದರೂ ಶಾಸಕರು ಬಿಗ್‌ಬಾಸ್‌ಗೆ ಹೋಗಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ಯಾವುದೇ ಶಾಸಕರು ಈ ರೀತಿ ಮಾಡಿಲ್ಲ. ಇವರ ವರ್ತನೆ ನಗೆಪಾಟಿಲಿಗೆ ಈಡಾಗುವಂತೆ ಆಗಿದೆ” ಎಂದಿದ್ದರು. ಜತೆಗೆ ಹಲವರು ಪ್ರದೀಪ್ ಈಶ್ವರ್ ವಿರುದ್ಧ ಹೇಳಿಕೆ ನೀಡಿದ್ದರು. ಸದ್ಯ ಟೀಕೆಗಳಿಗೆ, ಟ್ರೋಲ್‌ಗಳಿಗೆ ಪ್ರದೀಪ್ ಈಶ್ವರ್ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದು, ಅವರ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.