ಬೆಂಗಳೂರು: ಸಾಕಷ್ಟು ಕುತೂಹಲಗಳೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್ 10(BBK Season 10) ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್ ಈ ಬಾರಿ ಎದುರಾಗಿದೆ. ಅದರಲ್ಲಿ ಮುಖ್ಯವಾಗಿ ಸ್ಪರ್ಧಿಗಳನ್ನು ವೋಟಿಂಗ್ ಮೂಲಕ ಆಯ್ಕೆ ಮಾಡುವ ಹೊಸ ತಂತ್ರವನ್ನು ಈ ಬಾರಿ ಅಳವಡಿಸಿಕೊಳ್ಳಲಾಗಿದೆ. ಈ ಬಾರಿ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಸೆಲೆಕ್ಟ್ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್ ತಿಳಿಸಿದರು.
ನಿಯಮ ಏನು ಹೇಳುತ್ತದೆ?
ಬಿಗ್‌ಬಾಸ್ ಹೊಸ ನಿಯಮದ ಪ್ರಕಾರ ವೀಕ್ಷಕರಿಂದ ಶೇ. 80ಕ್ಕೂ ಹೆಚ್ಚು ಮತಗಳನ್ನು ಗಳಿಸಿದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಒಳಕ್ಕೆ ನೇರ ಹೋಗುವ ಅವಕಾಶ ಇದೆ. ಶೇ. 40ಕ್ಕೂ ಕಡಿಮೆ ಮತಗಳು ಬಂದವರು ವಾಪಸ್ ತಮ್ಮ ಮನೆಗೆ ಹೋಗಬೇಕಿತ್ತು. ಶೇ. 80ಕ್ಕಿಂತಲೂ ಕಡಿಮೆ, ಶೇ. 40ಕ್ಕಿಂತಲೂ ಹೆಚ್ಚು ಮತಗಳು ಬಂದವರು ಬಿಗ್ಬಾಸ್ನಿರ್ಣಯಕ್ಕೆ ಕಾಯಬೇಕು.
ವೇಟಿಂಗ್ ಲಿಸ್ಟ್‌ನಲ್ಲಿ ಯಾರ್ಯಾರು?
ಡ್ರೋನ್ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈಗ ಇವರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಲಾಗಿದ್ದು, ಒಂದು ವಾರದಲ್ಲಿ ತೋರಿಸಲಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ನೇರ ಆಯ್ಕೆಯಾದವರ ಕಿರು ಪರಿಚಯ ಇಲ್ಲಿದೆ.
ನಮ್ರತಾ ಗೌಡ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾಗಿಣಿ 2’ ಧಾರಾವಾಹಿ ಮೂಲಕ ನಮ್ರತಾ ಗೌಡ ಜನಪ್ರಿಯರಾಗಿದ್ದಾರೆ. ‘ಪುಟ್ಟಗೌರಿ’ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು. ನಮ್ರತಾ ಗೌಡ ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.
ಸ್ನೇಹಿತ್ ಗೌಡ
‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಸ್ನೇಹಿತ್ ಗೌಡ ಮನೆ ಮಾತಾದರು. ಹಲವು ಧಾರಾವಾಹಿಗಳಿಗೆ ಅಡಿಷನ್ ನೀಡಿ ಕೊನೆಗೆ ಆಯ್ಕೆಯಾದೆ ಎಂದು ಅವರು ಸುದೀಪ್ ಜತೆ ಹೇಳಿಕೊಂಡರು. ಸುದೀಪ್ ಅವರನ್ನೂ ಒಮ್ಮೆಯಾದರೂ ಭೇಟಿಯಾಗಬೇಕು ಎನ್ನುವುದು ಅವರ ಕನಸಾಗಿತ್ತಂತೆ. ಫಿಟ್ನೆಸ್‌ಗೆ ಬಹಳ ಪ್ರಾಧಾನ್ಯತೆ ನೀಡುವ ಸ್ನೇಹಿತ್ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಸಲುವಾಗಿ ಈ ಶೋಗೆ ಬಂದಿದ್ದೇನೆ ಎಂದಿದ್ದಾರೆ.
ರ‍್ಯಾಪರ್ ಇಶಾನಿ
ರ‍್ಯಾಪರ್ ಆಗಿರುವಂತಹ ಇಶಾನಿ ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಮೂಲತಃ ಮೈಸೂರಿನವರಾಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಈಗಾಗಲೇ 17 ಇಂಗ್ಲೀಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಈಶಾನಿ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವುಗಳಲ್ಲಿ ರೈಟರ್, ಊರ್ಮಿಳಾ, ಫ್ರೀಡಮ್ ಮುಖ್ಯವಾದವು. ವಿದೇಶಗಳಲ್ಲಿದ್ದರೂ ಅವರು ಕನ್ನಡ ಮಾತನಾಡುತ್ತಿರುವುದು ವಿಶೇಷ.
ವಿನಯ್ ಗೌಡ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುಮಾರು 2 ವರ್ಷಗಳ ಕಾಲ ಪ್ರಸಾರವಾದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ವಿನಯ್ ಗೌಡ ಗಮನ ಸೆಳೆದರು. ಬಳಿಕ ʼಉಘೇ ಉಘೇ ಮಾದೇವ’, ‘ಜೈ ಹನುಮಾನ್’ ʼಯಡಿಯೂರು ಸಿದ್ಧಲಿಂಗೇಶ್ವರ’ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ.
ಕಾಮಿಡಿ ಕಿಲಾಡಿ ಸಂತೋಷ್
5 ಸ್ಪರ್ಧಿಯಾಗಿ ಆಯ್ಕೆಯಾದ ಸಂತೋಷ್ ಪತ್ನಿ ಜತೆ ʼಜಯ ಜಯ ಜಾಕೆಟ್ʼ ಹಾಡಿಗೆ ಹೆಜ್ಜೆ ಹಾಕುತ್ತಾ ಸ್ಟೇಜ್‌ಗೆ ಎಂಟ್ರಿ ಕೊಟ್ಟರು. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು. ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಮಜಾಭಾರತ ಹಾಗೂ ಜೀ ಟಿವಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಸಂತೋಷ್ ಮನೆ ಮಾತಾಗಿದ್ದಾರೆ.
ನೀತು ವನಜಾಕ್ಷಿ
ʼಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ಪಟ್ಟ ಗೆದ್ದ ನೀತು ಹುಟ್ಟಿದ್ದು ಗದಗದಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್. ‘ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು. ನೀತು ವನಜಾಕ್ಷಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರದಲ್ಲೂ ಅಭಿನಯಿಸಿದ್ದಾರೆ. ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ʻಗಮ ಗಮ’ ಎನ್ನುವ ಹೊಟೇಲ್ ಉದ್ಯಮಿಯೂ ಆಗಿದ್ದಾರೆ.
ಸಿರಿ
ಸುಮಾರು 20 ವರ್ಷಗಳಿಂದ ಸಿರಿ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಕಲರ್ಸ್ ಕನ್ನಡ ವಾಹಿನಿಯ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ನಂತರ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಸಿರಿ ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’, ʼಬಂದೇ ಬರುತಾವ ಕಾಲʼ, ‘ಅಂಬಿಕಾ’ ಸೇರಿ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಸ್ನೇಕ್ ಶ್ಯಾಮ್
ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಶ್ಯಾಂ ದಶಕಗಳಿಂದ ಇದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ. 1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ನೇಕ್ ಶ್ಯಾಮ್ ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಇದುವರೆಗೆ ಇವರು ಹಿಡಿದ ಹಾವುಗಳ ಸಂಖ್ಯೆ ಸುಮಾರು 86 ಸಾವಿರದಷ್ಟಿದೆ.
ಭಾಗ್ಯಶ್ರೀ
ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿರುವ ಭಾಗ್ಯಶ್ರೀ ಇದೀಗ ಬಿಗ್‌ಬಾಸ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ‘ಬದುಕು’, ‘ಲಕ್ಷಣ’ದಂಥ ಧಾರಾವಾಹಿಗಳ ಮೂಲಕ ಇವರು ಜನಪ್ರಿಯ. ‘ಬದುಕೇ ನನಗೆ ತುಂಬ ಕಲಿಸಿದೆ. ಪ್ರಿಪೇರ್ ಆಗಿ ಬದುಕುವುದು ನನಗೆ ಗೊತ್ತಿಲ್ಲ. ಪರಿಸ್ಥಿತಿ ಹೇಗೆಬರುತ್ತದೆಯೋ ಹಾಗೆ ಇರುತ್ತೇನೆ’ ಎನ್ನುವ ಭಾಗ್ಯಶ್ರೀ ಅವರಿಗೆ ವೋಟಿಂಗ್ ಮನವಿಗೆ ಜನರು ಸ್ಪಂದಿಸಿದ್ದು 81% ಮಂದಿ.
ಗೌರೀಶ್ ಅಕ್ಕಿ
ಕೊಪ್ಪಳ ಜಿಲ್ಲೆಯ ಮುಧೋಳ ಮೂಲದ ಗೌರೀಶ್ ಅಕ್ಕಿ ಮೊದಲು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿಕೊಟ್ಟರು. ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ಆನಂತರ ಡೈರೆಕ್ಟರ್ ಕ್ಯಾಪ್ ತೊಟ್ಟರು. 2016ರಲ್ಲಿ ತೆರೆಗೆ ಬಂದ ‘ಸಿನಿಮಾ ಮೈ ಡಾರ್ಲಿಂಗ್’ ಚಿತ್ರವನ್ನ ಗೌರೀಶ್ ಅಕ್ಕಿ ನಿರ್ದೇಶಿಸಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ‘ಚಾರ್ಮಿನಾರ್’, ‘ಲೂಸಿಯಾ’, ‘ಸಿಪಾಯಿ’, ‘3000’ ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ.
ಈ ಮೈಖಲ್ ಅಜಯ್?
ನೈಜೇರಿಯಾ ಮೂಲದ ಮೈಖಲ್ ಅಜಯ್ ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆಯುತ್ತಾರೆ. ಅವರಿಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್, ‘ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು’ ಎನ್ನುತ್ತಾರೆ. ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.
ಇದನ್ನೂ ಓದಿ: BBK Season 10: ಕನ್ನಡ ಮಾತಾಡಿ ಮೋಡಿ ಮಾಡಿದ ನೈಜೇರಿಯಾದ ಅಜಯ್‌ಗೆ ಸಿಕ್ತು ಚಾನ್ಸ್