ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಆರಂಭವಾಗಿದೆ (BBK Season 10). ಈ ಬಾರಿ 7 ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟವರು ಹಿರಿಯ ನಟಿ ಸಿರಿ. 8ನೇ ಸ್ಪರ್ಧಿ ಸ್ನೇಕ್ ಶ್ಯಾಮ್.
ಸಿರಿ
ಸುಮಾರು 20 ವರ್ಷಗಳಿಂದ ಸಿರಿ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಕಲರ್ಸ್ ಕನ್ನಡ ವಾಹಿನಿಯ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ನಂತರ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಸಿರಿ ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’, ʼಬಂದೇ ಬರುತಾವ ಕಾಲʼ, ‘ಅಂಬಿಕಾ’ ಸೇರಿ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಕನ್ನಡ ಸೇರಿದಂತೆ ತೆಲುಗು ಚಿತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’, ಕಿಚ್ಚ ಸುದೀಪ್ ನಟನೆಯ ‘ಚಂದು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ನಾನು ನಾನಾಗಿರಬೇಕು’ ಎಂಬ ಆಸೆಯೊಂದಿಗೆ ಅವರು ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ.
ಸೂಕ್ಷ್ಮ ವ್ಯಕ್ತಿತ್ವದ, ತುಸು ಕೋಪಿಷ್ಠರಾದ ಸಿರಿ ಅವರಿಗೆ ಜನರು 83% ವೋಟ್ ಮಾಡಿದ್ದಾರೆ. ತಂದೆಯ ನೆನಪಿಸಿಕೊಂಡು ಬಲಗಾಲಿಟ್ಟು ಸಿರಿ ಮನೆಯೊಳಗೆ ಹೋಗಿದ್ದಾರೆ.
ಇದನ್ನೂ ಓದಿ: BBK Season 10: 4ನೇ ಸ್ಪರ್ಧಿಯಾಗಿ ಆಯ್ಕೆಯಾದ ವಿನಯ್ ಗೌಡ, 5ನೇ ಸ್ಪರ್ಧಿ ಸಂತೋಷ್
ಸ್ನೇಕ್ ಶ್ಯಾಮ್
ಸ್ನೇಕ್ ಶ್ಯಾಮ್ ಬಿಗ್‌ಬಾಸ್ ಮನೆಯೊಳಗೆ 84% ವೋಟ್ ಪಡೆದು ಕಾಲಿಟ್ಟಿದ್ದಾರೆ. ಸ್ನೇಕ್ ಶ್ಯಾಮ್ ಅವರಿಗೆ ಪ್ರಾಣಿಗಳೇ ಸರ್ವಸ್ವ. ಸ್ನೇಕ್ ಶ್ಯಾಮ್ ಚಿಕ್ಕಂದಿನಿಂದಲೇ ಪ್ರಾಣಿಪ್ರಿಯರಾಗಿದ್ದರಂತೆ. ವಯಸ್ಸಾದವರನ್ನೂ ಆರೈಕೆ ಮಾಡುವುದು ಅವರ ವಿಶೇಷ ಗುಣ.
ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಶ್ಯಾಂ ದಶಕಗಳಿಂದ ಇದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ. 1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ನೇಕ್ ಶ್ಯಾಮ್ ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಇದುವರೆಗೆ ಇವರು ಹಿಡಿದ ಹಾವುಗಳ ಸಂಖ್ಯೆ ಸುಮಾರು 86 ಸಾವಿರದಷ್ಟಿದೆ. ಇವರು ಕೇವಲ ಹಾವುಗಳನ್ನು ಮಾತ್ರ ಹಿಡಿಯುವುದಲ್ಲದೆ, ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತ ಬಂದಿದ್ದಾರೆ. ಜನರನ್ನು ಮಾತನಾಡಿಸುತ್ತಾ, ರೇಗಿಸುತ್ತಾ ಹಾವು ಹಿಡಿಯುವುದು ಅವರ ಹವ್ಯಾಸ. ಈಗಾಗಲೇ ಇವರು ರಾಷ್ಟ್ರ ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ.
ಬಿಗ್‌ಬಾಸ್ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.