Site icon Vistara News

BBK SEASON 10: ಕನ್ನಡ ಪತ್ರವನ್ನು ಓದಿದ ಮೈಕಲ್‌; ದಂಗಾದ ಸ್ಪರ್ಧಿಗಳು

mikle

mikle

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿಕೊಂಡು 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ವೈಲ್ಡ್‌ ಕಾರ್ಡ್‌ ಮೂಲಕ ಅವಿನಾಶ್‌ ಶೆಟ್ಟಿ ಮತ್ತು ಪವಿ ಪೂವಪ್ಪ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು ಸ್ಪರ್ಧೆಯನ್ನು ಮತ್ತಷ್ಟು ರೋಚಕವಾಗಿಸಿದೆ. ಈ ಮಧ್ಯೆ ಟಾಸ್ಕ್‌ ವೇಳೆ ಮೈಕಲ್‌ ಕನ್ನಡ ಪತ್ರವನ್ನು ಓದಿ ಗಮನ ಸೆಳೆದಿದ್ದಾರೆ.

ಕ್ವಿಜ್‌ ಟೈಮ್‌

ಬಿಗ್‌ ಬಾಸ್‌ ಒಂದು ಮಜವಾದ ಟಾಸ್ಕ್‌ ನೀಡಿದ್ದರು. ಅದರಂತೆ ತಟ್ಟೆಯಲ್ಲಿರುವ ತಿಂಡಿಯನ್ನು ಯಾರು ವೇಗವಾಗಿ ತಿನ್ನುತ್ತಾರೋ ಅವರು ಪ್ರಶ್ನೆ ಕೇಳಲು ಅರ್ಹತೆ ಪಡೆಯುತ್ತಾರೆ. ಅದರಂತೆ ಮೊದಲು ಟಾಸ್ಕ್‌ ಮುಗಿಸಿದ್ದು ಮೈಕಲ್‌. ಪ್ರಶ್ನೆ ಕನ್ನಡದಲ್ಲಿ ಬರೆದಿತ್ತು. ʼಯಾರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಾರೆ?ʼ ಎಂದು ಮೈಕಲ್‌ ಕನ್ನಡದಲ್ಲಿ ಬರೆದಿರುವುದನ್ನು ಓದಿ ಹೇಳಿದರು. ಬಳಿಕ ಇನ್ನೊಂದು ಪ್ರಶ್ನೆ, ʼಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?ʼ ಎಂದು ಮೈಕಲ್‌ ಓದಿ ಹೇಳಿದರು. ಸದ್ಯ ಈ ಪ್ರೊಮೋವನ್ನು ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಅನಿವಾಸಿ ಕನ್ನಡಿಗ

ಮೈಕಲ್‌ ಅನಿವಾಸಿ ಕನ್ನಡಿಗ. ಅವರು ಕನ್ನಡಿಗನಾದರೂ ಹುಟ್ಟಿ ಬೆಳೆದಿದ್ದು ನೈಜೀರಿಯಾದಲ್ಲಿ. ಹೀಗಾಗಿ ಅವರಿಗೆ ಸ್ಪಷ್ಟ ಕನ್ನಡ ಬರುವುದಿಲ್ಲ. ಆದರೂ ಅವರು ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡ ಕಲಿಯುತ್ತಿದ್ದಾರೆ. ಆದಷ್ಟು ಕನ್ನಡದಲ್ಲೇ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಅವರ ಈ ಶ್ರದ್ಧೆಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಿರೂಪಕ ಕಿಚ್ಚ ಸುದೀಪ್‌ ಕೂಡ ಮೈಕಲ್‌ ಅವರ ಕನ್ನಡ ಪ್ರೀತಿಯನ್ನು ಮೆಚ್ಚಿದ್ದರು.

ಇದನ್ನೂ ಓದಿ: BBK SEASON 10: ಮೈಕಲ್‌ ಅಚ್ಚ ಕನ್ನಡಕ್ಕೆ ಸಿಕ್ತು ಕಿಚ್ಚನ ಚಪ್ಪಾಳೆ!

ಕಿಚ್ಚನ ಚಪ್ಪಾಳೆ

ಬಿಗ್‌ಬಾಸ್‌ನಲ್ಲಿ ಬಹುತೇಕರು ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ. ಇತ್ತೀಚೆಗೆ ಅವರೆಲ್ಲರನ್ನೂ ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದರು. ಮೈಕಲ್‌ ಕನ್ನಡವನ್ನೇ ಉದಾಹರಣೆಯನ್ನಾಗಿಟ್ಟುಕೊಂಡು ಇಂಗ್ಲಿಷ್‌ ಮಾತನಾಡುವ ಇತರ ಸ್ಪರ್ಧಿಗಳಿಗೆ ಕನ್ನಡವನ್ನೇ ಹೆಚ್ಚು ಬಳಸುವಂತೆ ತಾಕೀತು ಮಾಡಿದ್ದರು. ಅತಿಯಾಗಿ ಇಂಗ್ಲಿಷ್‌ ಪದ ಮಾತನಾಡುತ್ತಿರುವವರ ಮಧ್ಯೆ ಮೈಕಲ್‌ ಕನ್ನಡ ಕಲಿಕೆಗೆ ಸುದೀಪ್‌ ಫಿದಾ ಆಗಿದ್ದಾರೆ. ʼ‘ನನಗೆ ಅವಕಾಶ ಕೊಟ್ಟರೆ ನಿಮಗೆಲ್ಲರಿಗೂ ಒಂದು ಡಿಫರೆಂಟ್​ ಕನ್ನಡ ಸಿಗುತ್ತದೆ’ʼ ಎಂದು ಬಿಗ್‌ ಬಾಸ್‌ ಮನೆಗೆ ಬರುವ ಮೊದಲೇ ಮೈಕಲ್‌ ಹೇಳಿದ್ದರು. ಅದರಂತೆ ಅವರು ಈಗ ಕನ್ನಡ ಕಲಿತು ಬಳಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಂಗೀತಾ ಹಾಗೂ ಮೈಕಲ್‌ ಮಧ್ಯೆ ದೊಡ್ಡ ಜಗಳ ಆಗಿತ್ತು. ಸಂಗೀತಾ ನಡೆದುಕೊಂಡ ರೀತಿ ಕಂಡು ಮೈಕಲ್ ಸಿಟ್ಟಾಗಿ, ‘’ಸಂಗೀತಾ ಅವಕಾಶವಾದಿ, ಸಮಯ ಸಾಧಕಿ’’ ಎಂದು ಹೇಳಿದ್ದರು. ಈ ʼಸಮಯ ಸಾಧʼಕಿ ಪದವನ್ನು ಮೈಕಲ್‌ ಕಲಿತುಕೊಂಡು ಬಳಕೆ ಮಾಡಿದ್ದರು. ಇದನ್ನೇ ಸುದೀಪ್‌ ವೇದಿಕೆಯಲ್ಲಿ ಪ್ರಸ್ತಾವಿಸಿ ಮೈಕಲ್‌ಗೆ ಮೆಚ್ಚುಗೆ ಸೂಚಿಸಿದ್ದರು. ಇದಕ್ಕೆ ಮೈಕಲ್‌​ ಕನ್ನಡದಲ್ಲಿಯೇ ‘ಧನ್ಯವಾದಗಳು ಸರ್​’ ಎಂದು ಹೇಳಿ ಗಮನ ಸೆಳೆದಿದ್ದರು. ಇದೀಗ ಕನ್ನಡ ಓದುವ ಮೂಲಕ ಮೈಕಲ್‌ ಮತ್ತೊಮ್ಮೆ ತಮ್ಮ ಕನ್ನಡ ಪ್ರೀತಿಯನ್ನ ಸಾರಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version