ಬೆಂಗಳೂರು: ಸಾಕಷ್ಟು ಕುತೂಹಲ, ಟ್ವಿಸ್ಟ್ ಗಳೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್ 10(BBK Season 10) ಅ. 8ರಂದು ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಅಚ್ಚರಿ ಈ ಬಾರಿ ಎದುರಾಗಿದೆ. ಅಷ್ಟೇ ಅಲ್ಲದೇ ಈ ಬಾರಿಯದು ಹ್ಯಾಪಿ ಬಿಗ್ ಬಾಸ್ ಕೂಡ. ಮೊದಲ ದಿನವೇ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ಸ್ಪರ್ಧಿಗಳು ಸಖತ್ ಥ್ರಿಲ್ ಆಗಿದ್ದರು.
ನಾವೆಲ್ಲ ಸ್ಪರ್ಧೆ ಮಾಡ್ತಾ ಇರೋದು ಒಬ್ಬ ಎಂಎಲ್‌ಎ ಜತೆಗೆ ಎನ್ನುವುದು ಸ್ಪರ್ಧಿಗಳ ಖುಷಿಗೆ ಕಾರಣ. ಇತ್ತ ಪ್ರದೀಪ್ ಈಶ್ವರ್ ಭಾಗವಹಿಸಿರುವ ಪ್ರೋಮೊ ಹೊರ ಬಿದ್ದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಶಾಸಕ ಸ್ಪರ್ಧಿಯಾಗಿ ಹೋಗಿರುವುದಕ್ಕೆ ಭಾರಿ ಅಸಮಾಧಾನದ ಮಾತುಗಳು ಕೇಳಿ ಬಂದವು. ಇದೀಗ ಅಸಲಿ ಸತ್ಯ ಬಹಿರಂಗವಾಗಿದೆ. ತಾವು ಕೇವಲ ಅತಿಥಿಯಾಗಿ ಬಂದಿರುವುದು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಗ್ರ್ಯಾಂಡ್ ಎಂಟ್ರಿ ಕೊಟ್ಟ ಪ್ರದೀಪ್, ʼʼನಾನು ಈ ಶೋನಲ್ಲಿ ಸ್ಪರ್ಧಿಸುತ್ತಿರುವುದು ಖುಷಿ ನೀಡಿದೆʼʼ ಎಂದು ಅವರು ಮನೆಯೊಳಗೆ ಬಂದ ಕೂಡಲೇ ಹೇಳಿದ್ದರು. ಆದರೆ ಅವರು ಬಂದಿರುವುದು ಸ್ಪರ್ಧಿಯಾಗಿ ಅಲ್ಲ ಎಂಬ ವಿಚಾರ ಈಗ ಬಹಿರಂಗ ಆಗಿದೆ.
ರಾಜಕಾರಣಿ ಮಾತ್ರವಲ್ಲದೆ ಮೋಟಿವೇಷನಲ್ ಸ್ಪೀಕರ್ ಆಗಿ ಪ್ರದೀಪ್ ಈಶ್ವರ್ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲೂ ಅವರು ಅದೇ ಕೆಲಸ ಮಾಡಿದ್ದಾರೆ. ‘ʼಇಲ್ಲಿ ಇರುವ ಯಾವ ಸ್ಪರ್ಧಿಗಳ ಬಗ್ಗೆ ನಿಮಗೆ ಒಳ್ಳೆಯ ಮತ್ತು ಕೆಟ್ಟ ಇಂಪ್ರೆಷನ್ ಇದೆ?ʼʼ ಎಂದು ಆರಂಭದಲ್ಲೇ ಪ್ರಶ್ನೆ ಕೇಳಿ ಎಲ್ಲರಿಂದಲೂ ಉತ್ತರ ಪಡೆದುಕೊಂಡಿದ್ದರು. ಪ್ರದೀಪ್ ಈಶ್ವರ್ ಅವರ ಮಾತುಗಳನ್ನ ಕೇಳಿ ಇಶಾನಿ ಹಾಗೂ ನಮ್ರತಾ ಗೌಡ ಕಣ್ಣೀರು ಸುರಿಸಿದ ಪ್ರಸಂಗವೂ ನಡೆಯಿತು.
ಗೊಂದಲಕ್ಕೆ ತೆರೆ ಎಳೆದ ಬಿಗ್‌ಬಾಸ್
ಪ್ರದೀಪ್ ಈಶ್ವರ್ ಸ್ಪರ್ಧಿಯಲ್ಲ, ಕೇವಲ ಅತಿಥಿ ಎಂದು ಸ್ವತಃ ಬಿಗ್‌ಬಾಸ್ ಸ್ಪಷ್ಟನೆ ನೀಡಿದ್ದಾರೆ. ‘’ಪ್ರದೀಪ್ ಈಶ್ವರ್… ನೀವು ಈ ಮನೆಗೆ ಸ್ಪರ್ಧಿಯಾಗಿ ಆಗಮಿಸಿದ್ದೀರಿ ಎನ್ನುವ ವಿಷಯ ಕೇಳಿ ಸದಸ್ಯರಲ್ಲಿ ಆಶ್ಚರ್ಯ, ಖುಷಿ, ಗೊಂದಲ ಮೂಡಿದೆ. ಈಗ ನಿಜ ಹೇಳುವ ಸಮಯ. ನೀವು ಈ ಸೀಸನ್‌ನ ಬಿಗ್‌ಬಾಸ್ ಮನೆಗೆ ಆಗಮಿಸಿರುವ ಮೊದಲ ಅತಿಥಿ. ನಿಮಗೆ ಸ್ವಾಗತʼʼ ಎಂದು ಬಿಗ್‌ಬಾಸ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಭರ್ಜರಿಯಾಗಿಯೇ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಪ್ರದೀಪ್ ಈಶ್ವರ್ ಖಡಕ್ ಡೈಲಾಗ್ ಕೂಡ ಹೇಳಿದ್ದರು. ʻʻನಾನು ನಿನ್ನೆಯೇ ಬಿಗ್ ಬಾಸ್ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್ ಇಲ್ಲʼʼ ಎಂದು ಸ್ಪರ್ಧಿಗಳ ಮುಂದೆ ಹೇಳಿದ್ದರು.
ಇದನ್ನೂ ಓದಿ: BBK Season 10: ಕಲರ್‌ಫುಲ್ ಮನೆಗೆ ಖಡಕ್ ಡೈಲಾಗ್ ಮೂಲಕ ಭರ್ಜರಿ ಎಂಟ್ರಿ ಕೊಟ್ರು MLA ಪ್ರದೀಪ್ ಈಶ್ವರ್!
ಸದ್ಯ ಬಿಗ್‌ಬಾಸ್ ಮನೆಯೊಳಗೆ 11 ಮಂದಿಗೆ ನೇರ ಎಂಟ್ರಿ ಸಿಕ್ಕಿದೆ. ಮಿಕ್ಕ 6 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಈ ವಾರ ಉತ್ತಮವಾಗಿ ಆಡುವವರು ಮನೆಯೊಳಗೆ ಉಳಿಯಲಿದ್ದಾರೆ. ಯಾರಿಗೆ ಈ ಅವಕಾಸ ಸಿಗಲಿದೆ ಎನ್ನುವ ಕುತೂಹಲ ನೋಡುಗರದ್ದು. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.