ಮುಂಬೈ: ಫರ್ಹಾನ್ ಅಖ್ತರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಭಾಗ್ ಮಿಲ್ಖಾ ಭಾಗ್ʼ ಸಿನಿಮಾ ಈ ವರ್ಷಕ್ಕೆ ಒಟ್ಟು 10 ವಸಂತಗಳನ್ನು ಪೂರೈಸಿದೆ. ಸಾವಿರಾರು ಜನರಿಗೆ ಸ್ಫೂರ್ತಿ ತುಂಬಿದ ಈ ಸಿನಿಮಾವನ್ನು ಈ ವರ್ಷ 30 ನಗರಗಳಲ್ಲಿ ಮರುಬಿಡುಗಡೆ ಮಾಡಲು ಸಿನಿ ತಂಡ ನಿರ್ಧರಿಸಿದೆ. ಇದೇ ಆಗಸ್ಟ್ 6ರಂದು ಸಿನಿಮಾ ಮರುಬಿಡುಗಡೆಯಾಗುತ್ತಿದೆ.
ಈ ಬಗ್ಗೆ ಸಿನಿಮಾದ ನಿರ್ದೇಶಕರಾಗಿರುವ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ಮಾಹಿತಿ ನೀಡಿದ್ದಾರೆ. “ನಮ್ಮೊಂದಿಗೆ ಇಲ್ಲದ ಮಿಲ್ಖಾ ಸಿಂಗ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕಲಾವಿದರು ಮತ್ತು ಸಿಬ್ಬಂದಿಗಾಗಿ ವಿಶೇಷ ಪ್ರದರ್ಶನಗಳನ್ನು ನಡೆಸುತ್ತಿದ್ದೇವೆ. ಮಿಲ್ಖಾ ಅವರ ಪುತ್ರಿ ಕೂಡ ನಮ್ಮೊಂದಿಗೆ ಸಿನಿಮಾ ವೀಕ್ಷಿಸಲಿದ್ದಾರೆ. ಹಾಗೆಯೇ ಅವರ ಪುತ್ರ ಜೀವ್ ಮಿಲ್ಖಾ ಅವರು ಲಂಡನ್ನಲ್ಲಿ ಟೂರ್ನಮೆಂಟ್ನಲ್ಲಿ ಆಟವಾಡುತ್ತಿದ್ದು, ಮುಂಬೈನಲ್ಲಿ ನಮ್ಮೊಂದಿಗೆ ಸಿನಿಮಾ ನೋಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈ ವಿಶೇಷ ಪ್ರದರ್ಶನಗಳು ಆದ ನಂತರ ಆಗಸ್ಟ್ 6ರಂದು ಚಿತ್ರವನ್ನು 30 ಪ್ರಮುಖ ನಗರಗಳಲ್ಲಿ ಮರುಬಿಡುಗಡೆ ಮಾಡಲಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಲಿಫ್ಟ್ ಹತ್ತಿ ಯಾವ ಫ್ಲೋರ್ಗೆ ಹೋಗಬೇಕು ಎನ್ನುವುದನ್ನೂ ಹೇಳುತ್ತದೆ ಈ ಬೆಕ್ಕು!
ಹಾಗೆಯೇ ಈ ಬಾರಿ ವಿಶೇಷವಾಗಿ ಶ್ರವಣದೋಷವುಳ್ಳವರಿಗೂ ಸಿನಿಮಾ ಅರ್ಥವಾಗುವ ರೀತಿಯಲ್ಲಿನ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲಿ ಅವರ ಸಾಂಕೇತಿಕ ಭಾಷೆಯಲ್ಲಿ ಸಂಭಾಷಣೆ ಇರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
“ಮಿಲ್ಖಾ ಸಿಂಗ್ ಸಿನಿಮಾ ಬಿಡುಗಡೆಯಾಗಿ ನಂತರ ಬೆಳೆದ ಸಿನಿಮಾ. ಇದು ಹಲವರಿಗೆ ಹಲವಾರು ವಿಚಾರಗಳನ್ನು ಅರ್ಥೈಸಿದೆ. ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬಿದೆ. ಪ್ರಪಂಚದಾದ್ಯಂತ ನಾನು ಜನರನ್ನು ಭೇಟಿ ಮಾಡಿದಾಗ ಸಿನಿಮಾದಿಂದ ಸ್ಫೂರ್ತಿ ಪಡೆದ ಬಗ್ಗೆ ಅವರು ನನ್ನೊಂದಿಗೆ ಹೇಳಿಕೊಂಡಿದ್ದಾರೆ. ಇದು ನಮ್ಮ ಸಿನಿಮಾ ಆಗಿ ಉಳಿದುಕೊಂಡಿಲ್ಲ. ಇದು ಜನರ ಸಿನಿಮಾ ಆಗಿಬಿಟ್ಟಿದೆ” ಎಂದು ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.