ಬೆಂಗಳೂರು: ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಟಬು ಅಭಿನಯದ ʻಭೋಲಾʼ ಸಿನಿಮಾ (Bhola Movie) ಮಾರ್ಚ್ 30ರಂದು ರಾಮ ನವಮಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆ್ಯಕ್ಷನ್-ಥ್ರಿಲ್ಲರ್ ಭೋಲಾ ಸಿನಿಮಾವನ್ನು ಅಜಯ್ ದೇವಗನ್ ನಿರ್ದೇಶಿಸಿದ್ದಾರೆ. ಇದು 2019ರ ತಮಿಳು ಚಿತ್ರ ಕೈದಿಯ ರಿಮೇಕ್ ಆಗಿದೆ. ಮೊದಲ ದಿನ ಭೋಲಾ ಸಿನಿಮಾ 11.20 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೀಗೆ ಬರೆದಿದ್ದಾರೆ, “ಭೋಲಾ ಮೊದಲನೇ ದಿನದಂದು 11.20 ಕೋಟಿ ರೂ. ಕಲೆಕ್ಷನ್ ಮಾಡಿದೆʼʼಎಂದು ಬರೆದುಕೊಂಡಿದ್ದಾರೆ. ಭೋಲಾ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದ್ದರೂ ಸಹ ದೃಶ್ಯಂ ಸಿನಿಮಾದಷ್ಟು ಕಲೆಕ್ಷನ್ ಮಾಡಿಲ್ಲ.ಆದರೆ ಭೋಲಾ ಸಿನಿಮಾ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಗ್ರಹಣೆ ಮಾಡಬಹುದು ಎಂತಲೂ ವರದಿಯಾಗಿದೆ. ಐಪಿಎಲ್ ಪ್ರಾರಂಭವಾಗುವುದರಿಂದ ಸಿನಿಮಾ ಗಳಿಕೆಗೆ ತೊಂದರೆಯಾಗಬಹುದೆಂಬುದೂ ಸಹ ಹೇಳಲಾಗುತ್ತಿದೆ.
ಬಾಲಿವುಡ್ ಹಂಗಾಮಾ ಪ್ರಕಾರ, ಮೊದಲ ದಿನದಲ್ಲಿ ಪಠಾಣ್ 57 ಕೋಟಿ ರೂ. ಗಳಿಕೆ ಕಂಡಿತ್ತು. ಜೂಥಿ ಮೈನ್ ಮಕ್ಕರ್ 15.73 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇವೆರಡು ಸಿನಿಮಾಗಳ ಬಳಿಕ ಭೋಲಾ ಈ ವರ್ಷದ ಮೊದಲನೇ ದಿನ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ. ಅಜಯ್ ದೇವಗನ್ ಅವರ ದೃಶ್ಯಂ-2 ಸಿನಿಮಾ 15.38 ಕೋಟಿ ರೂ. ಮೂಲಕ ಪ್ರಬಲ ಓಪನಿಂಗ್ ಹೊಂದಿತ್ತು. ಅಂತಿಮವಾಗಿ 240.54 ಕೋಟಿ ರೂ. ಬಾಚಿಕೊಂಡಿತು. ದೃಶ್ಯಂ 2 ಮತ್ತು ಭೋಲಾ ಎರಡೂ ಮಲಯಾಳಂ ಮತ್ತು ತಮಿಳು ಚಿತ್ರಗಳ ರಿಮೇಕ್‌ಗಳಾಗಿವೆ. ಭೋಲಾ 2019ರಲ್ಲಿ ಬಿಡುಗಡೆಯಾದ ಲೋಕೇಶ್ ಕನಕರಾಜ್ ಅವರ ಕೈದಿಯ ರಿಮೇಕ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಶೆಹಜಾದಾ ಮತ್ತು ಸೆಲ್ಫಿ ಕೂಡ ರೀಮೇಕ್ ಆಗಿದ್ದರೂ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆ.
ಇದನ್ನೂ ಓದಿ: Bholaa trailer: ಅಜಯ್ ದೇವಗನ್ ನಟನೆ, ನಿರ್ದೇಶನದ ʻಭೋಲಾʼ ಟ್ರೈಲರ್ ಔಟ್
ʻಭೋಲಾʼ ಸಿನಿಮಾ 2019ರಲ್ಲಿ ಬಿಡುಗಡೆಯಾದ ತಮಿಳಿನ ʻಕೈದಿʼ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಬು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೋಲಾ ಚಿತ್ರವು ಅಜಯ್ ದೇವಗನ್ ಮತ್ತು ನಟಿ ಟಬು ಅವರ ಒಂಬತ್ತನೇ ಚಿತ್ರವಾಗಿದೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ 2ದಲ್ಲಿ ಕಾಣಿಸಿಕೊಂಡಿದ್ದಾರೆ .ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ.